ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ದೇಶಾದ್ಯಂತ ಜಾತಿ ಜನಗಣತಿ ನಡೆಸಲು ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿಂದು ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ದೇಶಾದ್ಯಂತ ಎಲ್ಲಾ ಸಮುದಾಯಗಳ ಶಕ್ತಿಯನ್ನು ಒಟ್ಟುಗೂಡಿಸಬೇಕು ಎಂಬ ಸಂಕಲ್ಪದೊಂದಿಗೆ ಜಾತಿ ಜನಗಣತಿ ನಡೆಸಬೇಕು ಎಂಬ ನಿಲುವನ್ನು ಕಾಂಗ್ರೆಸ್ ಹೊಂದಿದೆ. ಇದಕ್ಕೆ ನಾವು ಬದ್ಧರಾಗಿದ್ದೇವೆ. ಯಾರಿಗೂ ಆತಂಕ ಬೇಡ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಯಶಸ್ಸು ಯಾರ ಆಸ್ತಿಯೂ ಅಲ್ಲ. ರಾಜ ರಾಜನಾಗಿ, ಶ್ರೀಮಂತ ಶ್ರೀಮಂತನಾಗಿಯೇ ಇರುವುದಿಲ್ಲ, ಪ್ರಜಾಪ್ರಭುತ್ವದಲ್ಲಿ ಬಡವನೂ ರಾಜನಾಗಬಹುದು, ಶ್ರೀಮಂತನಾಗಬಹುದು. ಆದರೆ ಅದಕ್ಕೆ ಕಠಿಣ ಪರಿಶ್ರಮ ಮತ್ತು ಧೈರ್ಯದ ಅಗತ್ಯವಿದೆ ಎಂದು ಹೇಳಿದರು.

ಮನೆಯೆಂದ ಮೇಲೆ ಕಷ್ಟ, ಕಸ ಎರಡೂ ಇರುತ್ತದೆ. ಕಷ್ಟ ಬಂದಾಗ ಜಗ್ಗಬಾರದು, ಹೋರಾಟ ನಡೆಸಬೇಕು. ಭಗವದ್ಗೀತೆ, ರಾಮಾಯಣ, ಕುರಾನ್‍ಗಳು ಧರ್ಮಗ್ರಂಥಗಳಾಗಿದ್ದರೆ ಅಂಬೇಡ್ಕರ್‍ರವರ ಸಂವಿಧಾನ ದೇಶದ ಪವಿತ್ರ ಗ್ರಂಥ ಎಲ್ಲರ ಬದುಕಿನ ಆಸರೆ. ಶ್ರೀರಕ್ಷೆ ಕೂಡ ಹೌದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶೋಷಿತ ಸಮುದಾಯದ ಮುಖಂಡರು, ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಬೇಕು ಎಂಬ ಭಿನ್ನವತ್ತಳೆಯನ್ನು ಡಿ.ಕೆ.ಶಿವಕುಮಾರ್‍ರವರಿಗೆ ಸಲ್ಲಿಸಿದರು.
ಡಿ.ಕೆ.ಶಿವಕುಮಾರ್‍ರವರು ಮಾತನಾಡುತ್ತಿದ್ದ ವೇಳೆ, ಮುಖ್ಯಮಂತ್ರಿಯವರು ವೇದಿಕೆಗೆ ಆಗಮಿಸಿದರು. ಇದನ್ನು ಕಂಡು ಜನ ಸಿಳ್ಳೆ, ಚಪ್ಪಾಳೆಯ ಹರ್ಷೋದ್ಘಾರ ಮಾಡಿದರು. ಇದರಿಂದ ಕೆಲಕಾಲ ಡಿ.ಕೆ.ಶಿವಕುಮಾರ್ ತಮ್ಮ ಭಾಷಣವನ್ನು ಸ್ಥಗಿತಗೊಳಿಸಬೇಕಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಾಗರಾಜು ಯಾದವ್, ಪಿ.ಆರ್.ರಮೇಶ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕರು ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸರ್ಕಾರ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!