ಉದಯವಾಹಿನಿ, ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರು ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವುದಲ್ಲದೆ, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಉಪ ಮುಖ್ಯಮಂತ್ರಿಗಳ ನಿವಾಸದಲ್ಲಿ ನಿನ್ನೆ ಸೂರಜ್ ರೇವಣ್ಣ ಮತ್ತು ಡಿ.ಕೆ.ಶಿವಕುಮಾರ್ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಗೌಪ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಇದು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ. ರಾಜಕೀಯವಾಗಿ ತೀವ್ರ ಚರ್ಚೆಗೆ ಎಡಮಾಡಿ ಕೊಟ್ಟಿದೆ. ಅಲ್ಲದೆ, ಇಬ್ಬರು ಭೇಟಿಯಾದ ಪೋಟೋ ಮಾತ್ರ ಬಹಿರಂಗ ಪಡಿಸಿದ್ದು, ಹೆಚ್ಚಿನ ಮಾಹಿತಿ ನೀಡಿಲ್ಲ. ಇದು ಇನ್ನಷ್ಟು ಊಹಾಪೋಹಗಳಿಗೆ ಅವಕಾಶ ಕಲ್ಪಿಸಿದೆ.

ಹಾಸನ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಅಭ್ಯರ್ಥಿ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಹಿರಂಗವಾಗಿ ಈಗಾಗಲೇ ಘೋಷಿಸಿದ್ದು, ಗೊಂದಲಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಪಕ್ಷದ ಸಭೆಯನ್ನು ನಡೆಸುವ ಮೂಲಕ ಗೌಡರು ಚುನಾವಣೆ ಸಿದ್ಧತೆ ಆರಂಭಿಸಿದ್ದಾರೆ.
ಇದರ ನಡುವೆ ಶಿವಕುಮಾರ್ ಅವರನ್ನು ಸೂರಜ್ ಅವರು ಭೇಟಿಯಾಗಿರುವ ಉದ್ದೇಶವೇನು ಎಂಬ ಪ್ರಶ್ನೆ ಕೇಳಿಬರುತ್ತದೆ. ಇದೊಂದು ಸೌಹಾರ್ಧ ಭೇಟಿಯಾಗಿತ್ತು. ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿರಬಹುದು ಎಂದು ಜೆಡಿಎಸ್ ಮೂಲಗಳು ಸ್ಪಷ್ಟಪಡಿಸಿವೆ.

 

Leave a Reply

Your email address will not be published. Required fields are marked *

error: Content is protected !!