ಉದಯವಾಹಿನಿ, ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನ,ಈ ಹಿನ್ನೆಲೆಯಲ್ಲಿ ಮಾರಕ ಕ್ಯಾನ್ಸರ್ ಬಗ್ಗೆ ಬೆಂಗಳೂರಿನಲ್ಲಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ವತಿಯಿಂದ ನಾಗರಿಕರಿಗೆ ಜಾಗೃತಿ ಮೂಡಿಸಲಾಯಿತು.
ಇದಕ್ಕಾಗಿ ೫ ಕಿ.ಮೀ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ಇಂದು ಮುಂಜಾನೆ ಕಂಠೀರವ ಕ್ರೀಡಾಂಗಣದಲ್ಲಿ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಆಹಾರ ಪದ್ಧತಿ, ಒತ್ತಡದ ಜೀವನ ಮತ್ತು ಬೊಜ್ಜು, ಕಲುಷಿತ ಪರಿಸರ,ದೇಹ ದಂಡಿಸದೆ ಇರುವ ಕಾರಣದಿಂದ ಕ್ಯಾನ್ಸರ್ ರೋಗ ಬರಲು ಕಾರಣವಾಗಿದೆ ಎಂದರು.
ಕ್ಯಾನ್ಸರ್ ರೋಗವನ್ನು ಆರಂಭದಲ್ಲೆ ಪತ್ತೆ ಹಚ್ಚಿದರೆ ಅಮೂಲ್ಯ ಜೀವವನ್ನು ಉಳಿಸಬಹುದಾಗಿದೆ.ಇದಕ್ಕಾಗಿ ಪ್ರತಿಯೊಬ್ಬರು ಪ್ರತಿದಿನ ೧ ಗಂಟೆ ಅವರ ಆರೋಗ್ಯ ಕಾಪಾಡಿಕೊಳ್ಳಲು ಮೀಸಲಿಡಬೇಕು. ಯೋಗ,ವಾಕಿಂಗ್ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ವಿಶ್ವ ಕ್ಯಾನ್ಸರ್ ದಿನದಂದು ಕ್ಯಾನ್ಸರ್‌ಮುಕ್ತ ಸಮಾಜ ನಮ್ಮದಾಗಲಿ ಎಂಬ ಕಾರಣಕ್ಕಾಗಿ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದರು.
ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಅಧ್ಯಕ್ಷ ಡಾ. ರಾಜಶೇಖರ ಜಿ. ಜಾಕ ಮಾತನಾಡಿ, ಆರಂಭಿಕ ಹಂತದಲ್ಲೇ ಮಾರಕ ಕ್ಯಾನ್ಸರ್ ರೋಗವನ್ನು ಪತ್ತೆ ಮಾಡಿದರೆ, ಚಿಕಿತ್ಸೆ ನೀಡಿ ಜೀವ ಉಳಿಸಬಹುದು. ಮಹಿಳೆಯರು ಹೆಚ್ಚಾಗಿ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ.ಆದ್ದರಿಂದ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಪುಸ್ತಕ ಹೊರ ತಂದಿದ್ದೇನೆ. ಇದು ಕನ್ನಡ,ತಮಿಳು, ತೆಲುಗು ಸೇರಿದಂತೆ ೯ ಭಾಷೆಗಳಲ್ಲಿ ಮುದ್ರಣಗೊಂಡಿದೆ ಎಂದರು.
ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡ ತಕ್ಷಣ ಆತಂಕಪಡುವ ಅಗತ್ಯವಿಲ್ಲ.ಸಕಾಲದಲ್ಲಿ ತಪಾಸಣೆ ಮಾಡಿಕೊಂಡು ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಿದರೆ ಕ್ಯಾನ್ಸರ್‌ನಿಂದ ಮುಕ್ತಿ ಹೊಂದಬಹುದು ಎಂದು ಕಿವಿಮಾತು ಹೇಳಿದರು.
