ಉದಯವಾಹಿನಿ, ಬೆಂಗಳೂರು: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತ್ಯೇಕ ರಾಷ್ಟ್ರದ ಬಗ್ಗೆ ಹೇಳಿಕೆ ನೀಡಿದ ಲೋಕಾಸಭಾ ಸದಸ್ಯ ಡಿ.ಕೆ. ಸುರೇಶ್ ವಿರುದ್ಧ ಪ್ರತಿಭಟನೆ ನಡೆಸಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.ಡಿ.ಕೆ. ಸುರೇಶ್ ಅವರ ಸದಾಶಿವನಗರದ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಮಧ್ಯದಲ್ಲೇ ತಡೆದು ವಶಕ್ಕೆ ತೆಗೆದುಕೊಂಡರು.
ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ ಅವರ ನಿವಾಸದ ಬಳಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಆಗಮಿಸುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಮನೆಯ ಸ್ವಲ್ಪ ದೂರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸುಮಾರು ೩೫ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡ ಬಿಜೆಪಿ ಕಾರ್ಯಕರ್ತರನ್ನು ಬಿಎಂಟಿಸಿ ಬಸ್‌ನಲ್ಲಿ ಕರೆದೊಯ್ದಿದ್ದು,ಅವರಲ್ಲಿ ಬಿಜೆಪಿ ಯುವ ಮುಖಂಡರಾದ ಅನಿಲ್ ಶೆಟ್ಟಿ, ಪ್ರಶಾಂತ್, ಸಂದೀಪ್ ರವಿ, ಪ್ರತಾಪ್ ಸೇರಿದ್ದಾರೆ.
ತಿರುಚಿದ ಹೇಳಿಕೆ:
ಬಿಜೆಪಿ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಡಿ.ಕೆ. ಸುರೇಶ್, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ ವಾಕ್ ಸ್ವಾತಂತ್ರ್ಯ ಇದೆ. ಯಾರನ್ನೂ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಹೋರಾಟಕ್ಕೆ ಸಂಪೂರ್ಣ ಸಹಕಾರವನ್ನು ನಮ್ಮ ಸರ್ಕಾರ ಕೊಡುತ್ತದೆ. ನಾನು ಬಿಜೆಪಿ ಪ್ರತಿಭಟನೆಯನ್ನು ಸ್ವಾಗತ ಮಾಡುತ್ತೇನೆ. ದೇವರು ಬಿಜೆಪಿಗೆ ಒಳ್ಳೆಯದು ಮಾಡಲಿ. ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ.
ದೇಶ ವಿಭಜನೆ ಆಗಬೇಕು ನಾನು ಹೇಳಿಲ್ಲ ಅವರು ವಿಭಜನೆ ವಿಚಾರದಲ್ಲಿ ಹೋಗುತ್ತಿದ್ದಾರೆ. ಬೇರೆ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತೋರಿಸಬೇಕು. ಮಾಧ್ಯಮದವರದ್ದು ತಪ್ಪೋ, ಬಿಜೆಪಿಯವರದ್ದು ತಪ್ಪೋ, ನಂದು ತಪ್ಪೋ ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
