ಉದಯವಾಹಿನಿ, ಬೆಂಗಳೂರು : ಬಿಟ್ಟಿಭಾಗ್ಯಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುತ್ತಿದ್ದು ಅಭಿವೃದ್ಧಿಯನ್ನು ಮರೆತಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹರಿಹಾಯ್ದರು.
ಯಲಹಂಕ ಕ್ಷೇತ್ರ ವ್ಯಾಪ್ತಿಯ ಹುರಳಿ ಚಿಕ್ಕನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸುಮಾರು ೧.೬ ಕೋಟಿ ರೂ ಅಂದಾಜು ವೆಚ್ಚದ ರಸ್ತೆ,ಚಂರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೭ ತಿಂಗಳು ಕಳೆದಿದ್ದರೂ ಒಂದು ನಯಾ ಪೈಸೆಯ ಅನುದಾನ ದೊರೆತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ, ಭಾಗ್ಯಗಳನ್ನು ಘೋಷಣೆ ಮಾಡಿ ಜನರ ದಿಕ್ಕುತಪ್ಪಿಸುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನರಿಗೆ ಅಕ್ಕಿ ಕೊಡಲಾಗುತ್ತಿಲ್ಲ.ಕೇಂದ್ರ ಸರ್ಕಾರ ನೀಡಿರುವ ಅಕ್ಕಿಯನ್ನೇ ವಿತರಿಸಲಾಗುತ್ತಿದೆ, ಅಕ್ಕಿಯ ಬದಲಿಗೆ ರಾಜ್ಯ ಸರ್ಕಾರ ನೀಡುವ ೧೭೦ ರೂ.ಗೆ ಮೂರು ಕೆ.ಜಿ.ಅಕ್ಕಿ ಸಹ ಬರುವುದಿಲ್ಲ. ಸರ್ಕಾರದ ನಿಷ್ಕ್ರಿಯತೆಯನ್ನು ಗಮನಿಸಿರುವ ರಾಜ್ಯದ ಜನತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸುಭದ್ರವಾಗಿ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಯುವ ಮುಖಂಡ ಎಸ್.ವಿ. ಅಲೋಕ್ ರವರಿಗೆ ಟಿಕೆಟ್ ನೀಡಬೇಕೆಂದು ಕ್ಷೇತ್ರದ ಜನತೆಯ ಒತ್ತಾಯವಾಗಿದೆ.
ಅದಕ್ಕೆ ಪೂರಕ ವಾದ ವಾತಾವರಣ ಸಹ ನಿರ್ಮಾಣವಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಯನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕಿದೆ. ಯಲಹಂಕ ಕ್ಷೇತ್ರದಿಂದ ಈ ಬಾರಿ ಕನಿಷ್ಟ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರ ಕಾಯ್ದು ಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯ ಕರ್ತರು, ಮುಖಂಡರು ಕಾರ್ಯ ಪ್ರವೃತ್ತರಾಗಬೇಕಿದೆ ಎಂದರು.
ಕಾಮಗಾರಿಗೆ ಚಾಲನೆ: ಕೊಡಗೇತಿರುಮಲಾಪುರ- ಹುರುಳಿಚಿಕ್ಕನಹಳ್ಳಿ ಮುಖ್ಯರಸ್ತೆ ಅಭಿವೃದ್ಧಿ, ಬಿಳಿಜಾಜಿಯಲ್ಲಿ ಅಂಬೇಡ್ಕರ್ ಭವನ, ಹೆಸರಘಟ್ಡ ಗ್ರಾಮದಲ್ಲಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿ, ಐವರಕಂಡಪುರ ಕಾಲೋನಿಯಲ್ಲಿ ರಸ್ತೆ, ಚರಂಡಿ ಕಾಮಗಾರಿ, ಮುತ್ತುಗದಹಳ್ಳಿಯಲ್ಲಿ ಸ್ತ್ರೀ ಶಕ್ತಿ ಭವನ ನಿರ್ಮಾಣ ಸೇರಿದಂತೆ ಸುಮಾರು೧.೬ ಕೋಟಿ ರು.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
