
ಉದಯವಾಹಿನಿ, ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕ ವಿರುದ್ಧ ಕಂದಾಯ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಈ ಸಂಬಂಧ ಶಿಸ್ತು ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.
ಆಸ್ತಿ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಪಾಲಿಕೆ ಕಂದಾಯ ವಿಭಾಗ ಹಲವು ರೀತಿಯ ಕಾರ್ಯ ಯೋಜನೆ ರೂಪಿಸಿದೆ. ಇದರಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಗೃಹ ಹಾಗೂ
ಗೃಹೇತರ ಕಟ್ಟಡಗಳ ಮಾಲೀಕರ ಆಸ್ತಿ ಮುಟ್ಟುಗೋಲು ಹಾಗೂ ಬೀಗಮುದ್ರೆ ಹಾಕುವುದು ಕೂಡ ಸೇರಿದೆ.
ಈ ಸಂಬಂಧ ಈಗಾಗಲೇ ಪಾಲಿಕೆ ಎಂಟೂ ವಲಯಗಳಲ್ಲಿ ಬಿಬಿಎಂಪಿ ವಲಯ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಕಟ್ಟದ
ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕಾರ್ಯದಲ್ಲಿ ನಿರತರಾಗಿ
ದ್ದಾರೆ. ಆದರೆ, ಬೊಮ್ಮನಹಳ್ಳಿ ವಲಯ, ಬೇಗೂರು, ಯಲಚೇನಹಳ್ಳಿ, ಉತ್ತರಹಳ್ಳಿ, ಎಚ್.ಎಸ್. ಆರ್.ಲೇ ಔಟ್ ಮತ್ತು ಅರಕೆರೆ ಸೇರಿ ಮತ್ತಿತರ ಪ್ರದೇಶಗಳಲ್ಲಿ ಹಲವು ಮಾಲೀಕರು ೨೦ ಲಕ್ಷ ರೂ.ಗೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅಂತವರ ವಿರುದ್ಧ ಕಂದಾಯ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಪಾಲಿಕೆಯಲ್ಲಿ ಕೇಳಿಬಂದಿವೆ.
