ಉದಯವಾಹಿನಿ, ಬೆಂಗಳೂರು: ನಗರದಲ್ಲಿ ಮತ್ತೊಂದು ವಿದ್ಯಾ ಸಂಸ್ಥೆ ಮೇಲೆ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಲಾಗಿದ್ದು, ಯಶವಂತಪುರದ ಕೇಂದ್ರಿಯ ವಿದ್ಯಾಲಯದ ಭಾರತೀಯ ವಿದ್ಯಾಸಂಸ್ಥೆಗೆ ಬಾಂಬ್ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣಾವಾಗಿದೆ.
ಈ ಮೇಲ್ ಮಾಡಿರುವ ದುಷ್ಕರ್ಮಿಗಳು ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. Sahukarisrinuvasarao65@gmail.com ಎಂಬ ಮೇಲ್ ಐಡಿಯಿಂದ ಬೆದರಿಕೆ ಕರೆ ಬಂದಿದೆ. ಸ್ಕೂಲ್ ಒಳಗೆ ಬಾಂಬ್ ಇಟ್ಟಿದ್ದೇವೆ. ಬೆಳಗ್ಗೆ ೧೦:೨೦ ಕ್ಕೆ ಸ್ಫೋಟಗೊಳ್ಳುತ್ತದೆ ಎಂದು ಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ.
ಪೊಲೀಸ್ ಹಾಗು ಬಾಂಬ್ ನಿಷ್ಕ್ರಿಯ ದಳ ಶಾಲೆಯಲ್ಲಿ ಪರಿಶೀಲನೆ ನಡೆಸಿದಾಗ ಅದೊಂದು ಹುಸಿ ಬೆದರಿಕೆ ಪತ್ತೆಯಾಗಿದೆ.
ಬೆದರಿಕೆ ಸಂಬಂಧ ಕೇಂದ್ರೀಯ ವಿದ್ಯಾಲಯ ಪ್ರಿನ್ಸಿಪಾಲ್ ಅಮೃತಬಾಲ ಅವರು ದೂರು ದಾಖಲಿಸಿದ್ದು, ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಿಂಗಳ ಹಿಂದಷ್ಟೇ ತಲ್ಲಣ: ಕಳೆದ ೨೦೨೩ರ ಡಿಸೆಂಬರ್ ೧ರಂದು ಇದೇ ರೀತಿ ಬೆಂಗಳೂರಿನ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದಾಗಿ ಶಾಲೆ ಆಡಳಿತ ಮಂಡಳಿಗಳು ಬೆಚ್ಚಿ ಬಿದ್ದಿದ್ದವು. ನಗರದ ೩೦ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಮಕ್ಕಳು, ಆಡಳಿತ ಮಂಡಳಿ ಮತ್ತು ಪೋಷಕರು ಆತಂಕಕ್ಕೀಡಾಗಿದ್ದರು. ಪೊಲೀಸರು ಶಾಲೆಗಳಿಗೆ ದೌಡಾಯಿಸಿದ್ದು, ಬಾಂಬ್ ತಪಾಸಣೆ ದಳಗಳೂ ಬಂದಿದ್ದವು. ಎಲ್ಲಾ ಶಾಲೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸಲಾಗಿದ್ದು, ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಈ ಮೇಲ್ ಮೂಲಕ ಈ ಬಾಂಬ್ ಬೆದರಿಕೆ ಬಂದಿದೆ ಎಂದು ಹೇಳಲಾಗಿದ್ದು, ಬೆಳಗ್ಗೆ ಮೇಲ್ ಚೆಕ್ ಮಾಡುವಾಗ ಈ ವಿಷಯ ಗೊತ್ತಾಗಿದೆ. ಇದು ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಹೊರಗೆ ಕಳುಹಿಸಲಾಗಿತ್ತು. ಆಗಷ್ಟೇ ಒಳಗೆ ಬರುತ್ತಿದ್ದ ಮಕ್ಕಳನ್ನು ಒಳಗೆ ಬರದಂತೆ ಸೂಚಿಸಲಾಗಿತ್ತು. ಈ ವೇಳೆ ಹೆತ್ತವರು ಕೂಡಾ ಮಕ್ಕಳನ್ನು ಬಿಡಲು ಆಗಮಿಸಿದವರು ಅಲ್ಲೇ ಇದ್ದಿದ್ದರಿಂದ ಆತಂಕದ ವಾತಾವರಣ ಹೆಚ್ಚಾಯಿತು. ಕೆಲವರು ವಿಷಯ ತಿಳಿಯುತ್ತಿದ್ದಂತೆಯೇ ಓಡಿ ಬಂದಿದ್ದರು.
