ಉದಯವಾಹಿನಿ, ತುಮಕೂರು: ವ್ಯಕ್ತಿಯೊಬ್ಬರನ್ನು ಕೊಲೆಗೈದು ಶವವನ್ನು ಕೆರೆಯಲ್ಲಿ ಹಾಕಿದ್ದ ಪ್ರಕರಣವನ್ನು ಬೇಧಿಸಿರುವ ತಾಲ್ಲೂಕಿನ ಬೆಳ್ಳಾವಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತಾಲ್ಲೂಕಿನ ದೊಡ್ಡನಾರವಂಗಲ ಬಳಿ ಕ್ಯಾಬ್ ಚಾಲಕ ಜಗದೀಶ್ ಎಂಬುವರನ್ನು ಕೊಲೆ ಮಾಡಿ ಮೃತದೇಹವನ್ನು ಕೆರೆಯಲ್ಲಿ ಹಾಕಿದ್ದ ಹೆಗ್ಡೆರೆ ನಿವಾಸಿಗಳಾದ ಉಸ್ಮಾನ್ ಅನ್ಸಾರಿ (೨೪) ಹಾಗೂ ಎನ್.ನಿಶ್ಚಿತ್ (೨೦) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಜಗದೀಶ್ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹೊನ್ನೇನಹಳ್ಳಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಡಿ. ೮ ರಂದು ಜಗದೀಶ್ ಬೆಂಗಳೂರಿನಿಂದ ಅರಸೀಕೆರೆಯತ್ತ ಕ್ಯಾಬ್‌ನಲ್ಲಿ ಹೋಗುತ್ತಿದ್ದರು. ಆರೋಪಿಗಳು ಭೀಮಸಂದ್ರದಲ್ಲಿ ಕ್ಯಾಬ್ ಹತ್ತಿಕೊಂಡಿದ್ದರು. ಹಣ ಕಿತ್ತುಕೊಳ್ಳುವ ಉದ್ದೇಶದಿಂದ ಜಗದೀಶ್‌ರವರನ್ನು ಕ್ಯಾಬ್‌ನಲ್ಲಿಯೇ ಕತ್ತು ಹಿಸುಕಿ, ತಲೆಗೆ ಹೊಡೆದು ಕೊಲೆ ಮಾಡಿ, ದೊಡ್ಡನಾರವಂಗಲ ಬಳಿಯ ಕೆರೆಯಲ್ಲಿ ಮೃತದೇಹ ಎಸೆದು ಹೋಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ಳಾವಿ ಪೊಲೀಸರು ಗ್ರಾಮಾಂತರ ಸಿಪಿಐ ಜಿ.ಲಕ್ಷ್ಮಿಕಾಂತಯ್ಯ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಹಾಗೂ ಅಡಿಷನಲ್ ಎಸ್ಪಿ ಮರಿಯಪ್ಪ ಮಾರ್ಗದರ್ಶನದಲ್ಲಿ ಸಿಪಿಐ ಲಕ್ಷ್ಮೀಕಾಂತಯ್ಯ, ಪಿಎಸ್‌ಐಗಳಾದ ಎನ್.ಮೋಹನ್, ರಾಮಚಂದ್ರಯ್ಯ, ಎಎಸ್‌ಐ ಮೋಹನ್‌ಕುಮಾರ್ ಹಾಗೂ ಸಿಬ್ಬಂದಿಗಳಾದ ಡಿ.ಆರ್.ನರಸಿಂಹರಾಜು, ನಾಗರಾಜು, ಜಿ. ಈರಣ್ಣ, ರಮೇಶ್, ಮಹೇಶ್, ಮಧು, ಕೆ.ಎನ್. ಚಿದಾನಂದ, ಪರಮೇಶ್, ಫಕೃದ್ದೀನ್ ರವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!