ಉದಯವಾಹಿನಿ, ಬೆಂಗಳೂರು: ಪ್ರಸ್ತುತ ಘೋಷಣೆಯಾಗಿರುವ ರಾಜ್ಯಸಭಾ ಚುನಾವಣೆ ಹಾಗೂ ಸದ್ಯದಲ್ಲೇ ಎದುರಾಗಲಿರುವ ವಿಧಾನಪರಿಷತ್ ಚುನಾವಣೆಯ ನಾಲ್ಕು ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಹೈಕಮಾಂಡ್ ಜೊತೆ ಮಾತುಕತೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ದೆಹಲಿಗೆ ತೆರಳಿದ್ದಾರೆ.
ಫೆ.27ರಂದು ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ಒಂದು ಸ್ಥಾನ ಖಚಿತವಾಗಿದೆ. ಆದರೆ ಅಭ್ಯರ್ಥಿ ಯಾರು ಎನ್ನುವ ವಿಚಾರ ನಿರ್ಧಾರವಾಗಿಲ್ಲ. ಹಾಲಿ ಸದಸ್ಯರಾಗಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತೊಂದು ಅವಗೆ ಮುಂದುವರೆಯುವ ಅಪೇಕ್ಷೆ ಹೊಂದಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಹಾಲಿ ಸದಸ್ಯರನ್ನೇ ಪುನರಾಯ್ಕೆ ಮಾಡಲು ಬಯಸಿದ್ದರೆ ಅಭ್ಯರ್ಥಿ ಹೆಸರು ಶಿಫಾರಸ್ಸು ಮಾಡುವುದು ಬೇಡ, ಹೊಸಬರಿಗೆ ಅವಕಾಶ ನೀಡುವ ನಿರ್ಧಾರ ಮಾಡಿದ್ದಲ್ಲಿ ಅಥವಾ ಎರಡನೇ ಅಭ್ಯರ್ಥಿ ಕಣಕ್ಕಿಳಿಸಲು ಸೂಚಿಸಿದಲ್ಲಿ ಮಾತ್ರ ಅಭ್ಯರ್ಥಿ ಹೆಸರು ಶಿಫಾರಸು ಮಾಡುವಂತೆ ಈಗಾಗಲೇ ರಾಜ್ಯ ಕೋರ್ ಕಮಿಟಿ ನಿರ್ಧರಿಸಿದೆ.
ಈ ವಿಷಯವನ್ನೂ ಪ್ರಸ್ತಾಪಿಸಿ ವಿಜಯೇಂದ್ರ ಚರ್ಚೆ ನಡೆಸಲಿದ್ದು, ಒಂದು ವೇಳೆ ಎರಡನೇ ಸ್ಥಾನ ಜೆಡಿಎಸ್‍ಗೆ ಕೊಡಬೇಕೆಂಬ ಚಿಂತನೆ ಇದ್ದರೆ, ಆ ಬಗ್ಗೆಯೂ ಚರ್ಚಿಸಿ ಹೈಕಮಾಂಡ್ ಅಭಿಪ್ರಾಯ ಪಡೆದುಕೊಳ್ಳಲಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಿಧಾನ ಪರಿಷತ್‍ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅದಕ್ಕೂ ಅಭ್ಯರ್ಥಿಗಳ ಆಯ್ಕೆ ಕುರಿತು ಈಗಲೇ ಚರ್ಚಿಸಿ ನಿರ್ಧಾರಕ್ಕೆ ಬರಲು ಹೈಕಮಾಂಡ್ ಜೊತೆ ಮಾತುಕತೆ ನಡೆಸಲಾಗುತ್ತದೆ.
