ಉದಯವಾಹಿನಿ, ಪುತ್ತೂರು, : ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿಯಾದ ನಿಶ್ಮಿತಾ ಎಂಬ ಯುವತಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ರೂ.೨.೨೫ ಲಕ್ಷ ವಂಚನೆ ಮಾಡಿದ ಪ್ರಕರಣವನ್ನು ಬೇಧಿಸಿರುವ ಸಂಪ್ಯ ಪೊಲೀಸರು ಇಬ್ಬರು ಯುವತಿಯರ ಸಹಿತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಗ್ರಾಮದ ಸುಮಿತ್ರಾ ಬಾಯಿ ಸಿ.ಆರ್ (೨೩) ಮತ್ತು ಆಕೆಯ ಸಹೋದರ ರಾಹುಲ್ ಕುಮಾರ್ ನಾಯ್ಕ (೧೯) ಹಾಗೂ ಹಾಸನ ಜಿಲ್ಲೆಯ ಶಾಂತಿಗ್ರಾಮ ತಾಲೂಕಿನ ಹಳಸಿನಹಳ್ಳಿ ನಿವಾಸಿ ಸೌಂದರ್ಯ ಎಂ.ಎಸ್(೨೧) ಬಂಧಿತ ಆರೋಪಿಗಳು.ಈ ಸೈಬರ್ ಆರೋಪಿಗಳ ಬಗ್ಗೆ ಸಂಪ್ಯ ಪೊಲೀಸರು ಮಾಹಿತಿ ಸಂಗ್ರಹಿಸಿ, ಅವರನ್ನು ಬೆಂಗಳೂರು ನಗರದ ನಂದಿನಿ ಲೇ ಔಟ್‌ನ ಬಾಡಿಗೆ ಮನೆಯೊಂದರಲ್ಲಿ ಬುಧವಾರ ಪತ್ತೆ ಮಾಡಿ ಬಂಧಿಸಿ ಕರೆತಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
೨೦೨೩ರ ಜೂನ್ ೨೬ರಂದು ಪತ್ರಿಕೆಯೊಂದರಲ್ಲಿ ‘ಕರಾವಳಿ,ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆಫೀಸು ಕೆಲಸ ಖಾಲಿ ಇದೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ’ ಎಂದು ಉದ್ಯೋಗದ ಬಗ್ಗೆ ನೀಡಲಾಗಿದ್ದ ಜಾಹೀರಾತನ್ನು ನೋಡಿ ನಿಶ್ಮಿತಾ ಅವರು ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದರು. ಕರೆ ಸ್ವೀಕರಿಸಿದ ಅವರು, ನೀವು ಕೆಲಸಕ್ಕೆ ಸೇರ ಬಯಸುವುದಾದರೆ ಫೀಸ್ ಕೊಡಬೇಕೆಂದು ತಿಳಿಸಿ ನಂಬಿಸಿದ್ದರು. ಆರೋಪಿಗಳು ಸೂಚಿಸಿದಂತೆ ನಿಶ್ಮಿತಾ ಅವರು ೨೦೨೩ರಜೂನ್ ೨೮ರಿಂದ ೨೦೨೪ರ ಜನವರಿ೧೨ ರ ಅವಧಿಯಲ್ಲಿ ಹಂತ ಹಂತವಾಗಿ ಅಪರಿಚಿತ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಯುಪಿಐ, ಫೋನ್‌ಫೇ ಮತ್ತು ಗೂಗುಲ್ ಮೂಲಕ ಒಟ್ಟು ರೂ.೨,೨೫,೦೦೧ ಪಾವತಿ ಮಾಡಿದ್ದರು. ಆದರೆ ಆರೋಪಿಗಳು ಉದ್ಯೋಗವನ್ನೂ ನೀಡದೆ, ಪಡೆದುಕೊಂಡಿದ್ದ ಹಣವನ್ನೂ ಹಿಂತಿರುಗಿಸದೆ ಇರುವುದರಿಂದ ಮೋಸದ ಅರಿವಾದ ನಿಶ್ಮಿತಾ ಅವರು ಈ ಕುರಿತು ಜ. ೨೫ರಂದು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ನಿಶ್ಮಿತಾ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡು ಸೈಬರ್ ಆರೋಪಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದರು. ದ.ಕ.ಜಿಲ್ಲಾ ಎಸ್ಪಿ ಸಿ.ಬಿ.ರಿಷ್ಯಂತ್ ಮತ್ತು ಜಿಲ್ಲಾ ಹೆಚ್ಚುವರಿ ಎಸ್ಪಿಗಳಾದ ಧರ್ಮಪ್ಪ ಎಂ.ಎನ್ ಮತ್ತು ರಾಜೇಂದ್ರ ಡಿ.ಎಸ್ ಅವರ ನಿರ್ದೇಶನ ಮತ್ತು ಪುತ್ತೂರು ಡಿವೈಎಸ್ಪಿ ಅರುಣ್ ನಾಗೇ ಗೌಡ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಯ ಪ್ರಭಾರ ಸರ್ಕಲ್ ಇನ್ಸ್‌ಪೆಕ್ಟರ್ ರವಿ.ಬಿ.ಎಸ್ ಅವರ ಮಾರ್ಗದರ್ಶನದಲ್ಲಿ ಸಂಪ್ಯ ಎಸ್‌ಐ ಜಂಬೂರಾಜ್ ಬಿ.ಮಹಾಜನ್ ಅವರ ನೇತೃತ್ವದ ಪೊಲೀಸ್ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

error: Content is protected !!