ಉದಯವಾಹಿನಿ, ದೊಡ್ಡಬಳ್ಳಾಪುರ: ಪಶ್ಚಿಮ ಘಟ್ಟದ ಕೊಳವೊಂದರಲ್ಲಿ ಈಚೆಗೆ ಅಪರೂಪದ ‘ಅಣಬೆ ಕಪ್ಪೆ’ಯೊಂದು ಅಧ್ಯಯನ ತಂಡವೊಂದರ ಕಣ್ಣಿಗೆ ಬಿದ್ದಿದೆ.
ಕುದುರೆಮುಖ ಪರ್ವತ ಶ್ರೇಣಿಯ ತಪ್ಪಲಿನ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಕೊಳವೊಂದರಲ್ಲಿ ಕಂಡು ಬಂದ ‘ಗೋಲ್ಡನ್ ಬ್ಯಾಕ್ಡ್’ ಕಪ್ಪೆಯ ಪಕ್ಕೆಯ ಮೇಲೆ ಪುಟ್ಟದಾದ ಅಣಬೆ ಮೊಳಕೆಯೊಡೆದಿದೆ.
ಕೊಳೆತ ವಸ್ತು, ಮಣ್ಣು, ಮರದ ಮೇಲೆ ಮಾತ್ರ ಬೆಳೆಯುವ ಅಣಬೆಯು ಜೀವಂತ ಪ್ರಾಣಿಯ ಮೇಲೆ ಬೆಳೆದಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಶಿಲೀಂಧ್ರ (ಫಂಗೈ) ವರ್ಗಕ್ಕೆ ಸೇರಿದ ಅಣಬೆಯನ್ನು ‘ಮೈಸಿನ್’ ಅಥವಾ ‘ಬಾನೆಟ್ ಮಶ್ರೂಮ್’ ಎಂದು ಕರೆಯುತ್ತಾರೆ.
ಜೀವ ಜಗತ್ತಿನ ಅಚ್ಚರಿಯ ವಿದ್ಯಮಾನ ಮತ್ತು ಹೊಸ ಸಂಶೋಧನೆಗಳನ್ನು ಪ್ರಕಟಿಸುವ ಅಂತರರಾಷ್ಟ್ರೀಯ ನಿಯತಕಾಲಿಕ ‘ರೆಪ್ಟೈಲ್ಸ್‌ ಆಯಂಡ್‌ ಅಂಫಿಬಿಯನ್ಸ್’ನ ಜನವರಿ ಸಂಚಿಕೆಯಲ್ಲಿ ‘ಅಣಬೆ ಕಪ್ಪೆ’ ಕುರಿತಾದ ಸಂಶೋಧನಾ ಲೇಖನ ಪ್ರಕಟವಾಗಿದೆ.ಬೆಂಗಳೂರು ಮತ್ತು ದೊಡ್ಡಬಳ್ಳಾಪುರದಲ್ಲಿ ಕಚೇರಿ ಹೊಂದಿರುವ ವರ್ಲ್ಡ್‌ ವೈಡ್‌ ಫಂಡ್‌ ಫಾರ್‌ ನೇಚರ್‌ (ಡಬ್ಲ್ಯುಡಬ್ಲ್ಯುಎಫ್‌) ಸಂಸ್ಥೆಯ ಯುವ ಸಂಶೋಧಕರ ತಂಡ ‘ಕಪ್ಪೆ ಮತ್ತು ಹಾವುಗಳ ಚಲನವಲನ’ ಅಧ್ಯಯನಕ್ಕೆ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮಕ್ಕೆ ತೆರಳಿತ್ತು.
ಈ ತಂಡದಲ್ಲಿದ್ದ ಚಿನ್ಮಯ್ ಸಿ.ಮಳಿಯೆ, ನವೀನ್ ಅಯ್ಯರ್, ಬಿ.ಜಿ.ನಿಶಾ ಹಾಗೂ ಎಸ್‌.ಆಶಾ ಸೇರಿದಂತೆ ಅನೇಕರು ಸಂಶೋಧನಾ ಪ್ರಬಂಧ ಸಿದ್ಧಪಡಿಸಿ ವಿಜ್ಞಾನ ನಿಯತಕಾಲಿಕಕ್ಕೆ ಕಳಿಸಿದ್ದರು. ಕಪ್ಪೆಯ ಚಿತ್ರ ಗಮನಿಸಿದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಪರಿಸರ ಆಸಕ್ತರು, ಇದೊಂದು ಕೃತಕ ಬುದ್ಧಿಮತ್ತೆ (ಆರ್ಟಿಫಿಸಿಯಲ್‌ ಇಂಟೆಲಿಜೆನ್ಸ್‌) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಚಿತ್ರ ಅಥವಾ ಫೋಟೊಶಾಪ್ ಚಿತ್ರ ಇರಬಹುದು ಎಂದು ಅನುಮಾನಿಸಿದ್ದರು.

Leave a Reply

Your email address will not be published. Required fields are marked *

error: Content is protected !!