ಉದಯವಾಹಿನಿ, ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ಕೊಯಿರ ಗ್ರಾಮದ ಹಳೆಯ ಸರ್ಕಾರಿ ಆವರಣದಲ್ಲಿ ಮೂರು ಬೃಹತ್ ಮರಗಳನ್ನು ಕಿಡಿಗೇಡಿಗಳು ಕಡಿದು ಸಾಗಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ 12 ವರ್ಷಗಳಿಂದ ಈ ಶಾಲೆಯಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲ.
ಇಲ್ಲಿದ್ದ ಶಾಲೆಯನ್ನು ಗ್ರಾಮದಿಂದ ಅರ್ಧ ಕಿ.ಮೀ ದೂರದ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಸ್ಥಳ ಶಿಕ್ಷಣ ಇಲಾಖೆಯ ಸುಪರ್ದಿಯಲ್ಲಿದೆ.
ಆದರೆ ಮರ ಕಡಿದವರಿಂದ ಹೊಸ ಶಾಲೆಯ ಎಸ್‌ಡಿಎಂಸಿ ಹಣ ವಸೂಲಿ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ತಪ್ಪಿಸ್ಥರನ್ನು ರಕ್ಷಿಸಲು ಹೊಸ ಶಾಲಾ ಶಿಕ್ಷಕ ವೃಂದ ಸೇರಿದಂತೆ ಸ್ಥಳೀಯರ ಮುಖಂಡು ಸಭೆ ನಡೆಸಿ, ಅವರಿಂದ ಎಸ್‌ಡಿಎಂಸಿಗೆ ₹15 ಸಾವಿರ ಪಾವತಿಸುವಂತೆ ಮಾಡಿದ್ದಾರೆ.
ಮರ ಕಡಿಯಲು ಹೊಸ ಶಾಲೆಯ ಎಸ್‌ಡಿಎಂಸಿ ಅನುಮತಿಸಿರುವುದು ನಿಯಮಬಾಹಿರ ಹಾಗೂ ಟೆಂಡರ್ ಕರೆಯದೆ ಮರ ಕಡಿದು ಮಾರಾಟ ಮಾಡಿರುವುದು ನಿಯಮ ಉಲ್ಲಂಘನೆ ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಸಾರ್ವನಿಕವಾಗಿ ಚರ್ಚೆ ಆಗುತ್ತಿದ್ದಂತೆ ಹಳೆ ಶಾಲೆಯೂ ಹೊಸ ಶಾಲೆಗೆ ಸೇರಿದೆ ಎಂಬಂತೆ ಸಭಾ ನಡಾವಳಿಗಳನ್ನು ಸೃಷ್ಟಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.
