
ಉದಯವಾಹಿನಿ, ಮಹದೇಶ್ವರ ಬೆಟ್ಟ: ಇಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಸ್ಮಾರ್ಟ್ ತರಗತಿಗೆ ಬೇಕಾದ ಸ್ಮಾರ್ಟ್ ಟಿವಿ ಸೇರಿದಂತೆ ವಿವಿಧ ಸಲಕರಣೆಗಳನ್ನು ಶನಿವಾರ ವಿತರಿಸಿತು.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಹಾಗೂ ಪದಾಧಿಕಾರಿಗಳು ಮಹದೇಶ್ವರ ಬೆಟ್ಟದಿಂದ ಇಂಡಿಗನತ್ತ ಶಾಲೆಗೆ ತೆರಳಿ ಸಲಕರಣೆಗಳನ್ನು ನೀಡಿ, ಶಾಲೆಯ ಅಭಿವೃದ್ಧಿಗೆ ನೆರವು ನೀಡುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ, ಆ ಶಾಲೆಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕಾರಿಣಿ ಸಭೆ: ಮಹದೇಶ್ವರ ಬೆಟ್ಟದಲ್ಲಿ ಸಂಘದ ಕಾರ್ಯಕಾರಿಣಿಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹನೂರು ಶಾಸಕ ಆರ್.ಎಂ.ಮಂಜುನಾಥ್, ‘ಸರ್ಕಾರಿ ನೌಕರರು ತಮ್ಮ ಬೇಡಿಕೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಅದಕ್ಕೆ ನನ್ನ ಬೆಂಬಲವಿದೆ. ಮುಖ್ಯಮಂತ್ರಿಯವರಿಗೆ ಪತ್ರವನ್ನೂ ಬರೆದಿದ್ದೇನೆ’ ಎಂದರು.ನಿಮ್ಮೆಲ್ಲರ ಸಹಕಾರದಿಂದ ನನಗೆ ಒಂದು ಅವಕಾಶ ಸಿಕ್ಕಿದೆ. ಹನೂರು ಭೌಗೋಳಿಕವಾಗಿ ದೊಡ್ಡ ಕ್ಷೇತ್ರ. ಅಭಿವೃದ್ಧಿ ಪಡಿಸುವುದು ಸವಾಲಿನ ಸಂಗತಿ. ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೈಲಾದ ಪ್ರಾಮಾಣಿಕ ಕೆಲಸಗಳನ್ನು ಮಾಡುತ್ತೇನೆ’ ಎಂದರು.
