ಉದಯವಾಹಿನಿ, ಬೆಂಗಳೂರು: ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದೆ. ಕರ್ನಾಟಕದಲ್ಲಿ ಎಂಪಿ ಎಲೆಕ್ಷನ್ ಕಾವು ಜೋರಾಗುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಮೂಲಕ ಜನತೆ ಮುಂದೆ ಹೋಗಲಿದೆ. ಈ ಹಿನ್ನೆಲೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದು, ತನ್ನ ಭದ್ರಕೋಟೆಗಳನ್ನು ಮತ್ತಷ್ಟು ಭದ್ರಗೊಳಿಸಲು ಮುಂದಾಗಿದೆ. ಹೀಗಾಗಿ ಬಹುತೇಕ ಹಾಲಿ ಸಂಸದರನ್ನೇ ಮತ್ತೊಮ್ಮೆ ಕಣಕ್ಕಿಳಿ ಸುವ ಸಾಧ್ಯತೆಯಿದೆ.
ಹಾಲಿ ಸಂಸದರು ಸ್ಪರ್ಧಿಸಲು ಸಾಧ್ಯವಾಗದ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಹಾಲಿ ಸಂಸದರನ್ನು ಕಣಕ್ಕಿಳಿಸುವ ಮೂಲಕ ನಿರಂತರತೆಯನ್ನು ಕಾಯ್ದುಕೊಳ್ಳಲು ಬಿಜೆಪಿ ಮುಂದಾಗಿದೆ. ಕಮಲ ಪಡೆಯ ಈ ಕಾರ್ಯತಂತ್ರವನ್ನು ಹೆಸರು ಹೇಳಲಿಚ್ಛಿಸದ ಬಿಜೆಪಿಯ ಮಾಜಿ ಸಚಿವರೊಬ್ಬರೇ ಖಚಿತಪಡಿಸಿದ್ದಾರೆ. ಹೊಸ ಮುಖಗಳಿಗೆ ಆದ್ಯತೆ ಕೊಡಬೇಕು ಎಂದು ಬದಲಾವಣೆ ಮಾಡಿದರೆ ಪಕ್ಷಕ್ಕೆ ಹೊಡೆತ ಬೀಳಬಹುದು ಎಂಬುದನ್ನು ಬಿಜೆಪಿ ನಾಯಕರು ಅರಿತಂತೆ ಕಾಣುತ್ತಿದೆ.
ಹಾವೇರಿ ಕ್ಷೇತ್ರದಲ್ಲಿ ಸಂಸದ ಶಿವಕುಮಾರ್ ಉದಾಸಿ ಕಣದಿಂದ ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ಮತ್ತೊಬ್ಬರನ್ನು ಹುಡುಕಬೇಕಾದ ಅನಿವಾರ್ಯತೆ ಬಿಜೆಪಿಯಲ್ಲಿದೆ. ಇನ್ನು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯ ಬದಲಾಯಿಸುವ ಚಿಂತನೆಯನ್ನು ಬಿಜೆಪಿ ನಾಯಕರು ಮಾಡುತ್ತಿದ್ದು, ಹಾಲಿ ಸಂಸದೆ ಮಂಗಳಾ ಅಂಗಡಿ ಬದಲಿಗೆ ಬೇರೆಯವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಪಕ್ಷಕ್ಕೆ ವಾಪಸ್ ಆಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಳಗಾವಿಯ ಬಿಜೆಪಿ ಅಭ್ಯರ್ಥಿ ಆಗಬಹುದು ಎನ್ನಲಾಗಿದೆ.

ಅದು ಬಿಟ್ಟರೇ ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡದಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆಯ ಬಗ್ಗೆ ವದಂತಿಗಳು ಗಿರಕಿ ಹೊಡೆಯುತ್ತಲೇ ಇವೆ. ಆದರೆ, ಈ ಹಿಂದಿನ ಚುನಾವಣೆಗಳಲ್ಲಿ ಬದಲಾವಣೆಗೆ ಕೈ ಹಾಕಿ ಕೈ ಸುಟ್ಟುಕೊಂಡಿರುವುದನ್ನು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮುಂದೆ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!