ಉದಯವಾಹಿನಿ,ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದಲ್ಲಿ 67ನೇ ವರ್ಷದ ಶ್ರೀ ವೆಂಕಟೇಶ್ವರ ರಥೋತ್ಸವವು ಸಾಯಂಕಾಲ ಬಹಳ ವಿಜೃಂಭಣೆಯಿಂದ ಜರುಗಿತು.
ಪ್ರತಿ ವರ್ಷದಂತೆ ರಾಮನಗರದಲ್ಲಿ ನಡೆಯುವ ವೆಂಕಟೇಶ್ವರ ಜಾತ್ರಾ ಮಹೋತ್ಸವಕ್ಕೆ ಬುಧವಾರ ಸಂಜೆ ರಥವನ್ನು ಎಳೆಯುವುದರ ಮೂಲಕ ಚಾಲನೆ ನೀಡಲಾಯಿತು.ಸಾವಿರಾರು ಭಕ್ತಾಧಿಗಳು ಪಾಲ್ಗೋಳ್ಳುವ ಮೂಲಕ ರಥಕ್ಕೆ ಬಾಳೆಹಣ್ಣು ಎಸೆಯುವ ಭಕ್ತಿ ಮೆರೆದರು,
ತುಂಗಾಭದ್ರಾ ಹಿನ್ನೀರಿನ ಮುಳಗಡೆ ಪ್ರದೇಶದಿಂದ ಬಂದ ನಾಣಿಕೇರಿ ಗಂಗಾವತಿ ದಿ.ವೆಂಕೋಬಣ್ಣನವರು ರಥವನ್ನು ತಯಾರಿಸಿ ದಾನವಾಗಿ ನೀಡಿರುತ್ತಾರೆ. ಈ ವೆಂಕಟೇಶ್ವರ ಜಾತ್ರೆ ಕಾರ್ಯಕ್ರಮಗಳು ಸತತ 7 ದಿವಸಗಳ ಕಾಲ ಸಾಂಗೋಪಾಂಗವಾಗಿ ನಡೆಯುತ್ತವೆ.
ಶುಭಕೃತನಾಮ ಸಂವತ್ಸರದ ಮಾಘ ಶುದ್ಧ 10ರ ಶನಿವಾರ ಕಲಶ ಸ್ಥಾಪನೆ ಹಾಗೂ ಅಶ್ವೋತ್ಸವ ನಡೆದವು. ಮಾಘ ಶುದ್ಧ 11ರ ಬಾನುವಾರ ಹನುಮಂತೋತ್ಸವ ನಡೆಯಿತು. ಮಾಘ ಶುದ್ಧ 12ರ ಸೋಮವಾರ ಗರುಡೋತ್ಸವ ಜರುಗಿತು. ಮಾಘ ಶುದ್ಧ 13ರ ಮಂಗಳವಾರ ಶ್ವೇತ ಗಜೋತ್ಸವ ನಡೆದವು. ಮಾಘ ಶುದ್ಧ 14ರ ಬುಧವಾರ ಮಧ್ಯಾಹ್ನ 12-30ಕ್ಕೆ ಹೋಮಹವನಗಳು ಮುಗಿದ ನಂತರ “ಮಡಿ ತೇರು”ನ್ನು ಎಳೆಯಲಾಯಿತು. ಸಂಜೆ 5.00ಕ್ಕೆ 67ನೇ ವರ್ಷದ ಶ್ರೀ ವೆಂಕಟೇಶ್ವರ ರಥೋತ್ಸವವು ಬಹಳ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಜನ ಈ ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು. ಸುತ್ತ ಮುತ್ತಲಿನ ಹಳ್ಳಿಗಳಿಂದ ಎತ್ತಿನಬಂಡಿ, ಟ್ರ್ಯಾಕ್ಟರ್, ಟಾಟಾ ಏಸ್‍ಗಳಲ್ಲಿ ಮುಖಾಂತರ ಆಗಮಿಸಿದ್ದರು.
