ಉದಯವಾಹಿನಿ, ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಶಾಸಕರನ್ನು ಇಂದು ನಗರದ ಖಾಸಗಿ ರೆಸಾರ್ಟ್‍ಗೆ ಸ್ಥಳಾಂತರಿಸಲಾಗಿದೆ. ಇಂದು ಬೆಳಿಗ್ಗೆ ನಡೆದ ವಿಧಾನಸಭೆಯ ಕಲಾಪ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ಸಂತಾಪ ಸೂಚಕ ಸಭೆಯಾಗಿ ಪರಿವರ್ತನೆಯಾಯಿತು. ಭಾವಪೂರ್ಣ ಶ್ರದ್ಧಾಂಜಲಿಯ ಬಳಿಕ ಕಾಂಗ್ರೆಸ್ ಶಾಸಕರು ಮಾನ್ಯತಾ ಟೆಕ್ ಪಾರ್ಕ್‍ನಲ್ಲಿರುವ ಖಾಸಗಿ ಹೋಟೆಲ್‍ಗೆ ಸ್ಥಳಾಂತರಗೊಂಡಿದ್ದಾರೆ.

ಇಂದು ರಾತ್ರಿ ಹೋಟೆಲ್‍ನಲ್ಲಿ ತಂಗಲಿರುವ ಶಾಸಕರು ಶಾಸಕಾಂಗ ಸಭೆಯ ಬಳಿಕ ನಾಳೆ ಒಟ್ಟಾಗಿ ಬಸ್‍ನಲ್ಲಿ ವಿಧಾನಸಭೆಗೆ ಆಗಮಿಸಿ ಮತದಾನ ಮಾಡಲಿದ್ದಾರೆ. 135 ಶಾಸಕರ ಸಂಖ್ಯಾಬಲದಿಂದ ಕಾಂಗ್ರೆಸ್‍ನಲ್ಲಿ ರಾಜಾ ವೆಂಕಟಪ್ಪ ನಾಯಕರ ನಿಧನದ ಬಳಿಕ 134 ಶಾಸಕರ ಸಂಖ್ಯಾಬಲವಾಗಿದೆ. ಜೊತೆಗೆ ನಾಲ್ಕು ಮಂದಿ ಪಕ್ಷೇತರ ಶಾಸಕರ ಬೆಂಬಲವನ್ನು ಕಾಂಗ್ರೆಸ್ ನಾಯಕರು ಕೇಳಿದ್ದಾರೆ. ಶತಾಯಗತಾಯ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು ಎಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಅಡ್ಡ ಮತದಾನವಾಗದಂತೆ ಮುನ್ನೆಚ್ಚರಿಕೆ ವಹಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದು ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದಾರೆ. ಕೆಲವು ಹಿರಿಯ ಶಾಸಕರು ಶಾಸಕಾಂಗ ಸಭೆಗೆ ಗೈರು ಹಾಜರಾಗುವ ಸಾಧ್ಯತೆಯಿದೆ. ಆದರೆ ಮತದಾನಕ್ಕೆ ನೇರವಾಗಿ ಆಗಮಿಸಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೂ ಕಾಂಗ್ರೆಸ್‍ನಲ್ಲಿ ಒಳಗೊಳಗೇ ಆತಂಕ ಗೂಡು ಕಟ್ಟಿದೆ.

Leave a Reply

Your email address will not be published. Required fields are marked *

error: Content is protected !!