ಉದಯವಾಹಿನಿ, ಮೈಸೂರು: ನಗರದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಾರಕಾಸ್ತ್ರಗಳ ಸಮೇತ ರೌಡಿ ಶೀಟರ್ ಒಬ್ಬನನ್ನು ಬಂಧಿಸಿದ್ದಾರೆ. ಬೆಂಗಳೂರು ಹಾಗೂ ಮೈಸೂರು ನಗರದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಲಷ್ಕರ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿರುವ ಜಾವೆದ್ ಖಾನ್ ಅಲಿಯಾಸ್ ಸೈನೆಡ್ ಜಾವೆದ್ (42) ಬಂತ ರೌಡಿ ಶೀಟರ್.

ಈತನ ಮೇಲೆ ಈಗಾಗಲೇ ಹಲವು ಪ್ರಕರಣಗಳಿದ್ದರೂ ಮತ್ತೊಂದು ಕೃತ್ಯಕ್ಕೆ ಸಂಚು ಹಾಕುತ್ತಿದ್ದ ವೇಳೆ ಸಿಸಿಬಿ ಪೊಲೀಸರು ದಾಳಿ ಮಾಡಿ ಸೆರೆ ಹಿಡಿದರು. ಸಿಕ್ಕಿಬಿದ್ದ ವೇಳೆ ಜಾವೇದ್ ಖಾನ್ ಬಳಿ ವಿವಿಧ ನಮೂನೆಯ ಮೂರು ಡ್ರಾಗರ್‍ಗಳು ದೊರೆತಿದೆ. ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್‍ನಲ್ಲಿ ಡ್ರಾಗರ್‍ಗಳನ್ನು ಇಟ್ಟುಕೊಂಡಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಠಾಣೆಗೆ ಕರೆಸಿ ಎಚ್ಚರಿಕೆ ಕೊಡುವ ಬದಲು ರೌಡಿಶೀಟರ್‍ಗಳು ಇರುವ ಸ್ಥಳವನ್ನೇ ಹುಡುಕಿಕೊಂಡು ಹೋಗಿ ಪರಿಶೀಲನೆ ಮಾಡುವ ಜವಾಬ್ದಾರಿಯನ್ನು ಸಿಸಿಬಿ ಪೊಲೀಸರಿಗೆ ನೀಡಲಾಗಿದೆ. ಫೆ.23 ರ ರಾತ್ರಿ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಉನ್ನತಿ ನಗರದಲ್ಲಿ ಇನ್ಸ್‍ಪೆಕ್ಟರ್ ಪೂವಯ್ಯ ಮತ್ತು ಟೀಂ ರೌಂಡ್ಸ್ ಮಾಡುತ್ತಿದ್ದ ವೇಳೆ ಜಾವೆದ್ ಖಾನ್ ಮಾರಕಾಸ್ತ್ರಗಳ ಸಮೇತ ಸಿಕ್ಕಿ ಬಿದ್ದಿದ್ದಾನೆ.
2019 ರಲ್ಲಿ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾವೆದ್ ಖಾನ್ ಪಿಸ್ತೂಲ್ ಮಾರಾಟ ಮಾಡುವ ಯತ್ನದಲ್ಲಿ ವೇಳೆ ಸಿಸಿಬಿ ತಂಡಕ್ಕೆ ಸಿಕ್ಕಿ ಬಿದ್ದಿದ್ದ. ಬೆಂಗಳೂರು ಸಿಸಿಬಿ ಪೊಲೀಸರು ಜಾವೆದ್ ಖಾನ್ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದರು. ಆರೋಪಿಗಳಿಂದ ಮೂರು ಪಿಸ್ತೂಲ, ಒಂದು ರಿವಾಲ್ವರ್ ಹಾಗೂ 8 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಸದ್ಯ ಈ ಪ್ರಕರಣದಲ್ಲಿ ಜಾವೆದ್ ಆರೋಪಿಯಾಗೇ ಇದ್ದಾನೆ. ಅಲ್ಲದೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 307 ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿದೆ. ಇದೀಗ ಜಾವೇದ್ ಖಾನ್ ಎನ್.ಆರ್.ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!