ಉದಯವಾಹಿನಿ, ಬೆಂಗಳೂರು: ವಿಧಾನಸಭೆ ಸದಸ್ಯರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಂದು ಬೆಳಿಗ್ಗೆ ಸದನ ಪ್ರಾರಂಭವಾದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಿನ್ನೆ ನಿಧನರಾಗಿರುವುದನ್ನು ಸದನಕ್ಕೆ ತಿಳಿಸಿ ಸಂತಾಪ ನಿರ್ಣಯವನ್ನು ಮಂಡಿಸಿದರು.
ರಾಜಾ ವೆಂಕಟಪ್ಪ ನಾಯಕ ಅವರು 1957 ರ ನವೆಂಬರ್ 23 ರಂದು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಜನಿಸಿದ್ದರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರು, 1987 ರಲ್ಲಿ ಪೇಠ ಅಮ್ಮಾಪುರ ಮಂಡಲ ಪಂಚಾಯಿತಿಯ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿ ಅದೇ ಅವಧಿಯಲ್ಲಿ ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸುವ ಮೂಲಕ ಜನಾನುರಾಗಿಯಾಗಿದ್ದರು. 1994 ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಚುನಾಯಿತರಾಗಿದ್ದ ಅವರು, 1999, 2013 ಹಾಗೂ 2023 ರಲ್ಲಿ ಹದಿನಾರನೇ ವಿಧಾನಸಭೆಗೆ ಆಯ್ಕೆಯಾಗಿ ಪ್ರಸ್ತುತ ಸದನದಲ್ಲಿ ಸದಸ್ಯರಾಗಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎಲ್ಲಾ ಸಮುದಾಯದ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಸರಳ ಸಜ್ಜನಿಕೆಯ ನಾಯಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರ ಸಾವು ನಮಗೆಲ್ಲಾ ದೊಡ್ಡ ಮಟ್ಟದ ಸಂದೇಶವನ್ನು ನೀಡುತ್ತದೆ. ನಿನ್ನೆ ಮೊನ್ನೆಯವರೆಗೆ ನಮ್ಮೊಂದಿಗೆ ಇದ್ದವರು ನಿನ್ನೆ ನಿಧನರಾಗಿದ್ದಾರೆ. ದೇವರು ಎಷ್ಟು ವರ್ಷ ಆಯಸ್ಸು ಕೊಡುತ್ತಾನೋ ಅಷ್ಟು ದಿನ ನೆಮ್ಮದಿ ಜೀವನ ನಡೆಸಬೇಕು, ಇನ್ನೊಬ್ಬರ ನೆಮ್ಮದಿಗೂ ಸಹಕರಿಸಬೇಕು. ದ್ವೇಷ, ಕೋಪ, ಸಣ್ಣಪುಟ್ಟ ವಿಚಾರಕ್ಕೆ ತೊಂದರೆ ಕೊಡುವುದರಿಂದ ಮುಂದೆ ಪಶ್ಚಾತ್ತಾಪಪಡಬೇಕಾಗಬಹುದು. ದ್ವೇಷರಹಿತ, ಅಸೂಯೆ ರಹಿತ ಜೀವನ ನಡೆಸುವಂತಾಗಲಿ ಎಂದು ಹೇಳಿ ರಾಜಾ ವೆಂಕಟಪ್ಪ ನಾಯಕ ಅವರ ನಿಧನ ಅತ್ಯಂತ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರಪುರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನೋಡಲು ಹೋಗಿದ್ದೆ. ಆಗ ಅವರು ತುರ್ತು ಚಿಕಿತ್ಸಾ ಘಟಕದಲ್ಲಿದ್ದರು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎನ್ನಿಸಿರಲಿಲ್ಲ. ಕಾಂಗ್ರೆಸ್‍ನ ನಿಷ್ಠಾವಂತ ಶಾಸಕ, ನಾಲ್ಕು ಬಾರಿ ಶಾಸಕರಾಗಿದ್ದು, ಅತ್ಯಂತ ಸರಳ, ಸಜ್ಜನಿಕೆಯಿಂದ ಇದ್ದರು. ತಮ್ಮ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಳಕಳಿ ಹೊಂದಿದ್ದರು. ತಮ್ಮ ಅನಾರೋಗ್ಯವನ್ನು ಲೆಕ್ಕಿಸದೆ ಜನಪರ ಕಾರ್ಯ ಮಾಡುತ್ತಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೂ ಆಪ್ತರಾಗಿದ್ದರು. ಅವರನ್ನು ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗದವರಿಗೆ ರಾಜಾ ವೆಂಕಟಪ್ಪ ನಾಯಕರವರ ಅಗಲಿಕೆಯ ದುಃಖ ಭರಿಸಲಿ ಎಂದು ಹೇಳಿದರು.
