
ಉದಯವಾಹಿನಿ ಕುಶಾಲನಗರ :-ಹಿರಿಯ ನಾಗರಿಕರು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಬದುಕು ನಡೆಸುವಂತಾಗಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಅವರು ತಿಳಿಸಿದ್ದಾರೆ.ಹಿರಿಯ ನಾಗರಿಕರ ಸಪ್ತಾಹ ಪ್ರಯುಕ್ತ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿ ಏರ್ಪಡಿಸಿದ್ದ ಹಿರಿಯ ನಾಗರಿಕರ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಿರಿಯ ನಾಗರಿಕರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು. ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ಕಲ್ಪಿಸುವುದು, ಪಿಂಚಣಿ ಸೌಲಭ್ಯ, ಬಸ್‌ಪಾಸ್‌ನಲ್ಲಿ ರಿಯಾಯಿತಿ, ಪಾಲನೆ ಮತ್ತು ರಕ್ಷಣೆ ಹೀಗೆ ಹಲವು ಕಾರ್ಯಕ್ರಮಗಳಿದ್ದು, ಕಾನೂನು ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಕೆ.ಬಿ.ಪ್ರಸಾದ್ ಅವರು ಹೇಳಿದರು.ಹಿರಿಯ ನಾಗರಿಕರಾದ ತಿಮ್ಮಯ್ಯ ಅವರು ಮಾತನಾಡಿ ಹಿರಿಯರು ಎಂಬ ಹಿಂಜರಿಕೆ ಬೇಡ ಉತ್ಸಾಹದಿಂದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಅವರು ಹೇಳಿದರು. ಹಿರಿಯರಾದ ಮಾದಪ್ಪ ಅವರು ಮಾತನಾಡಿ ಹಿರಿಯರು ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಹಿರಿಯರಲ್ಲಿ ಎಲ್ಲರಿಗೂ ಕರುಣೆ ಇರಬೇಕು. ಹಿರಿಯ ನಾಗರಿಗೆ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಅವರು ಹೇಳಿದರು. ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ವಿಮಲ ಅವರು ಹಿರಿಯ ನಾಗರಿಕರಿಗೆ ಗುರುತಿನಚೀಟಿ, ಪಿಂಚಣಿ ಸೌಲಭ್ಯ, ಬಸ್ ಪಾಸ್‌ನಲ್ಲಿ ರಿಯಾಯಿತಿ, ಪಾಲನೆ ಮತ್ತು ರಕ್ಷಣೆ ಮತ್ತಿತರ ಸೌಲಭ್ಯಗಳು ಇವೆ ಎಂದು ಹೇಳಿದರು. ಹಿರಿಯರಾದ ಶಂಕರಿ ಪೊನ್ನಪ್ಪ ಮಾತನಾಡಿದರು, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬೆಳ್ಯಪ್ಪ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಇತರರು ಇದ್ದರು.
