
ಉದಯವಾಹಿನಿ,ರಾಮನಗರ :ಗ್ರಾಮೀಣ ಭಾಗದ ಕಸಬಾ ಮತ್ತು ಕೈಲಾಂಚ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಮನೆ ಕಳೆದು ಕೊಂಡಿರುವ ಸಂತ್ರಸ್ಥರಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಶುಕ್ರವಾರ ಸರ್ಕಾರದ ವತಿಯಿಂದ ಮೊದಲ ಹಂತದ ಪರಿಹಾರದ ಚೆಕ್ ವಿತರಿಸಿದರು.ತಾಲ್ಲೂಕು ತಹಶಿಲ್ದಾರ್ ಕಚೇರಿಯಲ್ಲಿ ಚಕ್ ವಿತರಣೆ ಮಾಡಿದ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಹಾನಿಗೊಳಗಾಗಿ ಮನೆ ಕಳೆದುಕೊಂಡ 33 ಸಂತ್ರಸ್ತರಿಗೆ ಮೊದಲ ಹಂತದಲ್ಲಿ 17.5 ಲಕ್ಷ ರೂಗಳ ಚೆಕ್ ವಿತರಿಸಲಾಗುತ್ತಿದ್ದು, ಮೂರು ಹಂತಗಳಲ್ಲಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್ ನಡೆಸಲಾಗುತ್ತಿದ್ದು ಅರ್ಹರಿಗೆ ಸ್ಥಳದಲ್ಲಿಯೆ ಆದೇಶ ಪತ್ರಗಳನ್ನು ವಿತರಿಸಲಾಗುತ್ತಿದೆ. ಇದರಿಂದ ವೃದ್ದರು, ಅಂಗವಿಕಲರು, ವಿದವೆಯರು ವಿನಾಕಾರಣ ತಾಲ್ಲೂಕು ಕಚೇರಿಗೆ ಅಲೆಯುವುದು ತಪ್ಪಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.ಸುಗ್ಗನಹಳ್ಳಿ ಸೇತುವೆ ಸೇರಿದಂತೆ ಮಳೆಹಾನಿಗೆ ಹಲವು ಸೇತುವೆಗಳು ಕೊಚ್ಚಿ ಹೋಗಿವೆ. ಇವುಗಳನ್ನು ತ್ವರಿತವಾಗಿ ದುರಸ್ತಿಗೊಳಿಸಲು ಮತ್ತು ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಕ್ತ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿರುವುದರಿಂದ ಸದ್ಯದಲ್ಲೇ ಹಣ ಬಿಡುಗಡೆ ಮಾಡುವ ವಿಶ್ವಾಸ ಇದೆ ಎಂದರು.ತಹಶಿಲ್ದಾರ್ ವಿಜಯ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಅಶ್ವತ್ಥ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ವಕ್ತಾರ ಬಿ.ಉಮೇಶ್, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ತಾಪಂ ಮಾಜಿ ಸದಸ್ಯ ಲಕ್ಷ್ಮಿಕಾಂತ, ಯುವ ಮುಖಂಡ ಮೋಹನ್ ಕೆ.ಚಂದ್ರಯ್ಯ ಇದ್ದರು.
