ಉದಯವಾಹಿನಿ, ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಮಾಧ್ಯಮಗಳು ಸರ್ಕಾರವನ್ನು ನೇಣಿಗೆ ಹಾಕಲು ಮುಂದಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಬಗ್ಗೆ 11 ಗಂಟೆಗೆ ವರದಿ ಬರಲಿದೆ. ಅದರ ಬಳಿಕ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ.

ನಿನ್ನೆವರೆಗಿನ ಮಾಹಿತಿ ಪ್ರಕಾರ ಇದೊಂದು ಕಾಲ್ಪನಿಕ ಘಟನೆ. ನಾವು ವಿಡಿಯೋದಲ್ಲಿರುವ ಆಡಿಯೋವನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಯಾವುದೇ ಘೋಷಣೆಗಳು ಪಾಕಿಸ್ತಾನದ ಪರವಾಗಿ ಕೂಗಿರುವುದು ಕಂಡುಬಂದಿಲ್ಲ. ನಾಸಿರ್ ಸಾಬ್, ನಾಸಿರ್ ಹುಸೇನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ, ಪಾಕಿಸ್ತಾನದ ಪರವಾಗಿ ಯಾವುದೇ ಘೋಷಣೆ ಕೂಗಿಲ್ಲ ಎಂದರು. ಆ ರೀತಿ ಘೋಷಣೆ ಕೂಗಿದ್ದರೆ ವೈಯಕ್ತಿಕ. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಈ ರೀತಿಯ ಘೋಷಣೆಗಳನ್ನು ಕೂಗುವುದು ದೇಶದ್ರೋಹ ಘಟನೆಯಾಗುತ್ತದೆ.

ಆಡಿಯೋ ಫೋರಂ ಸಿಟ್‍ನಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ, ಆಡಿಯೋ ಮಿಸ್ ಆಗಿರುವುದಾಗಿ ಹೇಳಲಾಗಿತ್ತು. ಆದರೂ ನಾವು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದರು. ಸುಳ್ಳು ಸುದ್ದಿಗಳ ಪ್ರಸಾರ ತಡೆಗೆ ಕಾನೂನು ಕೂಡ ಇದೆ. ಮಾಧ್ಯಮ 4 ನೆ ಅಂಗವಾಗಿದ್ದು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂದರು.

ಬಿಜೆಪಿ ಚುನಾವಣೆ ಸೋಲಿನಿಂದ ಹತಾಶರಾಗಿ ಹೋರಾಟಕ್ಕಿಳಿದಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾದ ನಾಸಿರ್ ಹುಸೇನ್ ಅವರು ಮಾಧ್ಯಮದ ಪ್ರತಿನಿಗಳನ್ನು ಏಕವಚನದಲ್ಲಿ ಮಾತನಾಡಿದ್ದು ಸರಿಯಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!