ಉದಯವಾಹಿನಿ, ಬೆಂಗಳೂರು: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಬೇಡಿ ಒಂದು ವೇಳೆ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ವಿಧಾನಸಭೆಯಲ್ಲಿ ತಿಳಿಸಿದರು. ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಸೋಮವಾರ ಸಕಾಲಕ್ಕೆ ಆಗಮಿಸಿದ್ದ ಶಾಸಕರ ಹೆಸರುಗಳನ್ನು ಪ್ರಕಟಿಸಿದ ನಂತರ ಸಭಾಧ್ಯಕ್ಷರು ಅಧಿಕಾರಿಗಳಿಂದ ನನಗೆ ಮಾಹಿತಿ ಬಂದಿದೆ.

ರಾಷ್ಟ್ರಧ್ವಜವನ್ನು ಸದನದೊಳಗೆ ತಂದಿದ್ದಾರೆ ಎಂಬ ಮಾಹಿತಿ ಇದೆ. ನನ್ನ ಜವಾಬ್ದಾರಿ, ಕರ್ತವ್ಯವನ್ನು ನಿಭಾಯಿಸಬೇಕು. ಯಾರೂ ಕೂಡ ಅವಮಾನ ಮಾಡಬಾರದು. ಸದನದ ಹೊರಗೆ ನಡೆದಿರುವ ಘಟನೆ ಬಗ್ಗೆ ಚರ್ಚೆ ಮಾಡಲು ಅಡ್ಡಿಯಿಲ್ಲ. ಅದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಆಗ ವಿರೋಧಪಕ್ಷದ ಶಾಸಕರ ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಎಲ್ಲಾ ಶಾಸಕರು ಆಕ್ರೋಶ ವ್ಯಕ್ತಪಡಿಸಿ, ಅಗೌರವ ನಾವು ಮಾಡಿಲ್ಲ, ಒಂದು ವೇಳೆ ನಾವು ಮಾಡಿದ್ದರೆ ಕಾನೂನು ಕ್ರಮ ಜರುಗಿಸಿ ಎಂದು ಸಿಡಿಮಿಡಿಗೊಂಡರು. ಅಶೋಕ್ ಮಾತನಾಡಿ, ಭಾರತದ ಧ್ವಜವನ್ನು ಹಿಡಿದು ಬರುವುದು ತಪ್ಪೇ? ಯಾರು ನಿಮಗೆ ಬಾವುಟವನ್ನು ತಂದಿದ್ದಾರೆ ಎಂದು ಹೇಳಿದರು ಎಂದು ಪ್ರಶ್ನಿಸಿದರಲ್ಲದೆ, ಭಾರತದ ಧ್ವಜವನ್ನು ಹಿಡಿಯಲು ನಮಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಹಲವು ಸದಸ್ಯರು ಎದ್ದು ನಿಂತು ಪ್ರತಿಯಾಗಿ ಮಾತನಾಡಲು ಮುಂದಾದಾಗ ಗೊಂದಲ ಉಂಟಾಯಿತು. ಆಗ ಸಭಾಧ್ಯಕ್ಷರು ಸದನದ ಹೊರಗೆ ನಡೆದಿರುವ ವಿಚಾರ ಬಗ್ಗೆ ಸರ್ಕಾರ ತನಿಖೆ ಮಾಡಲಿ, ತಕ್ಷಣ ತಪ್ಪಿತಸ್ಥರಿದ್ದರೆ ಕ್ರಮ ಕೈಗೊಳ್ಳಲಿ, ಅಂತಹ ವಿಚಾರವನ್ನು ಯಾರೂ ಸಹಿಸುವುದಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!