ಉದಯವಾಹಿನಿ, ಚಾಮರಾಜನಗರ: ಡೆಂಘೀ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ನಗರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಇವರ ವತಿಯಿಂದ ರಾಷ್ಟ್ರೀಯ ಡೆಂಘೀ ಜ್ವರದ ಜಾಗೃತಿ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಮುಂಭಾಗ ಆಯೋಜಿಸಲಾಗಿದ್ದ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರು ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು. ಅನಾವಶ್ಯಕ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಆರೋಗ್ಯ ಇಲಾಖೆ, ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಡೆಂಘೀ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ಮಾತನಾಡಿ ರೋಗಗಳು ಹೆಚ್ಚಾಗುವ ಮುನ್ನಾ ನಿಯಂತ್ರಣಾ ಕ್ರಮಗಳನ್ನ ಕೈಗೊಳ್ಳವುದು ಸೂಕ್ತ. ಈ ನಿಟ್ಟಿನಲ್ಲಿ ಎಲ್ಲಾ ಸ್ಥಳೀಯ ಮಟ್ಟದ ಸಂಸ್ಥೆಗಳಿಗೆ ಅಗತ್ಯ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಸಾರ್ವಜನಿಕರು ಸಹ ಜವಾಬ್ದಾರಿಯಿಂದ ಸ್ವಚ್ಚತೆಯನ್ನು ಕಾಪಾಡಬೇಕು ಎಂದರು.
ಮನೆಯ ಸುತ್ತಮುತ್ತಲಿರುವ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಮಳೆಯ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರನ್ನು ಶುದ್ದವಾಗಿಟ್ಟುಕೊಳ್ಳಬೇಕು. ಸೊಳ್ಳೆಗಳು ಸುಳಿಯದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ತಿಳಿಸಿದರು. ಡೆಂಘೀ ಅರಿವು ಜಾಥಾ ಜಿಲ್ಲಾಡಳಿತ ಭವನದ ಮುಂಭಾಗ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಘೋಷÀ ವಾಕ್ಯಗಳ ಮೂಲಕ ಸಾಗಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜೆ.ಎಸ್.ಎಸ್. ನಸಿರ್ಂಗ್ ವಿದ್ಯಾರ್ಥಿಗಳು, ಇನ್ನಿತರರು ಜಾಥಾದಲ್ಲಿ ಭಾಗವಹಿಸಿದ್ದರು.
