ಉದಯವಾಹಿನಿ, ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯಲ್ಲಿ ಅಧಿಕಾರಶಾಹಿ ಆಡಳಿತ ವಿರುದ್ಧ ಪಾಲಿಕೆ ಸರ್ವ ಸದಸ್ಯರು ಪಕ್ಷಬೇದ ಮರೆತು ಮುಗಿಬಿದ್ದಿದ್ದು, ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಜರುಗಿತು. ಇದಕ್ಕೆ ತಿರುಗೇಟು ಎನ್ನುವಂತೆ ಅಧಿಕಾರಿಗಳು ಸಹ ಕೈಗೆತ್ತಿಕೊಂಡ ಕಾಮಗಾರಿಗಳ ಬಗ್ಗೆ ಸಮರ್ಥಿಸಿಕೊಂಡರು. ಈ ಹಿನ್ನೆಲೆಯಲ್ಲಿ ಸದಸ್ಯರು ಹಾಗೂ ಅಧಿಕಾರಿಗಳ ಮಧ್ಯೆ ಕೆಲಹೊತ್ತು ಜಟಾಪಟಿ ನಡೆಯಿತು.

ಧಾರವಾಡದ ಕೋಳಿಕೆರೆ ಹೂಳೆತ್ತುವ ಕಾಮಗಾರಿ ಬಗ್ಗೆ ಬಿಜೆಪಿ ಸದಸ್ಯರು ಗಮನ ಸೂಚಿಸುವ ವಿಷಯವನ್ನು ಸಭೆಯ ಆರಂಭದಲ್ಲಿ ಪ್ರಸ್ತಾಪಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಧ್ವನಿಗೂಡಿಸಿ ನಮ್ಮ ವಾರ್ಡ್’ಗಳಲ್ಲಿಯೂ ಇದೇ ತರಹ ನಡೆಯುತ್ತಿದೆ ಎಂದು ಹರಿಹಾಯ್ದರು.

ಧಾರವಾಡದ ಕೋಳಿಕೆರೆ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಯನ್ನು ಅಮಾನತು ಮಾಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ನಮ್ಮ ವಾರ್ಡ್’ಗಳಲ್ಲಿಯೂ ಇದೇ ತರಹ ಅಧಿಕಾರಿಗಳು ಮಾಡಿದ್ದು, ಅವರನ್ನು ಅಮಾನತುಗೊಳಿಸಬೇಕು, ಒಬ್ಬರನ್ನೇ ಗುರಿಯಾಗಿಸಬಾರದು ಎಂದು ಒತ್ತಾಯಿಸಿದರು.

ಇದೇ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ ಗಲಾಟೆ ಏರ್ಪಟ್ಟಿತು, ಬಳಿಕ ಸಭೆಯನ್ನು ಹತ್ತು ನಿಮಿಷಗಳ ಕಾಲ ಮುಂಡೂಡಿದರು.

Leave a Reply

Your email address will not be published. Required fields are marked *

error: Content is protected !!