ಉದಯವಾಹಿನಿ, ಬೆಂಗಳೂರು: ಜಾತ್ರೆ, ದೇವರ ಉತ್ಸವ, ಶುಭ ಸಮಾರಂಭಗಳಿಗೆ ಬರುವ ವಯಸ್ಸಾದ ವೃದ್ಧರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಖತರ್ನಾಕ್ ಮಹಿಳೆಯರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಉತ್ತರ ವಿಭಾಗದ ಪೊಲೀಸರು ೧೪.೯ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ಜ್ಯೋತಿ(೩೯) ಹಾಗೂ ಆಶಾ (೩೨) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ೧೪.೯ ಲಕ್ಷ ಮೌಲ್ಯದ ೨೩೩ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ರಾಜಾಜಿನಗರದ ಮನೆಗೆ ಬೀಗ ಹಾಕಿಕೊಂಡು ಶಿವರಾತ್ರಿ ಪ್ರಯುಕ್ತ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಹೋಗಿ ವಾಪಾಸು ಬರುವಷ್ಟರಲ್ಲಿ ತಾವು ಧರಿಸಿದ್ದ ೩೨ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳವು ಮಾಡಲಾಗಿದ್ದು, ಈ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿರುವ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳೆಯರನ್ನು ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ. ಬಂಧಿತ ಮಹಿಳೆಯರಲ್ಲಿ ಒಬ್ಬಾಕೆ ೨೦೦೯ ನೇ ಸಾಲಿನಲ್ಲಿ ಶಂಕರಪುರ ಹಾಗೂ ಅನೇಕಲ್ ಪೊಲೀಸ್ ಠಾಣೆಗಳ ಮನೆ ಕಳವು, ಸಾಮಾನ್ಯ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಬಂಧಿತರು ಜಾತ್ರೆ, ದೇವರ ಉತ್ಸವ, ಶುಭ ಸಮಾರಂಭಗಳಲ್ಲಿರುವ ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರುಗಳ ಬಳಿಯಿರುವ ಚಿನ್ನಾಭರಣಗಳನ್ನು ಕಳ್ಳತನ ಮಾಡುವ ಪ್ರವೃತ್ತಿಯನ್ನು ಹೊಂದಿರುವುದು ತನಿಖೆಯಿಂದ ಗೊತ್ತಾಗಿದೆ.

Leave a Reply

Your email address will not be published. Required fields are marked *

error: Content is protected !!