ಉದಯವಾಹಿನಿ, ಮಾಲೂರು: ಮಳೆಯ ಅಭಾವ ಹಾಗೂ ನೀರಿನ ಕೊರತೆಯಿಂದ ಪಟ್ಟಣದ ದೊಡ್ಡಕೆರೆಯ ಒಡಲು ಬರಿದಾಗಿದ್ದು, ಇದೀಗ ಕೆರೆಯ ಅಂಗಳವು ಕಟ್ಟಡಗಳ ತ್ಯಾಜ್ಯ, ಕಸಕಡ್ಡಿಗಳನ್ನು ಹಾಕುವ ತಾಣವಾಗಿ ಮಾರ್ಪಟ್ಟಿದೆ.ಈ ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗದ ಕಾರಣ ಹಾಗೂ ಬೇಸಿಗೆಯಲ್ಲಿ ನೀರು ಬತ್ತಿ ಹೋದ ಕಾರಣ ಸುಮಾರು 132 ಎಕರೆ ವಿಸ್ತೀರ್ಣದ ದೊಡ್ಡಕೆರೆ ಬರಿದಾಗಿದೆ.ಕೆರೆಯ ಅಂಗಳವು ದೊಡ್ಡದಾಗಿದ್ದು, ಸಾರ್ವಜನಿಕರು ತಮ್ಮ ಮನೆಯಲ್ಲಿನ ತ್ಯಾಜ್ಯ ಹಾಗೂ ಹಳೆಯ ಕಟ್ಟಡಗಳ ತ್ಯಾಜ್ಯವನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದಾಗಿ ಕೆರೆಯ ಜಾಗಕ್ಕೆ ಧಕ್ಕೆ ಯೊದಗಿದ್ದು, ಮುಂದೊಂದು ದಿನ ಕೆರೆಯ ಅಂಗಳವೇ ಮುಚ್ಚಿ ಹೋಗ ಬಹುದಾದ ಸಾಧ್ಯತೆ ಎದುರಾಗಿದೆ.ದೊಡ್ಡಕೆರೆಯ ಅಂಗಳದಲ್ಲಿ ಇಲ್ಲಿನ ಪುರಸಭೆಯು ಸುಮಾರು 40ರಿಂದ 45 ಕೊಳವೆಬಾವಿಗಳನ್ನು ಕೊರೆಸಿದೆ. ಪೈಪ್‌ಲೈನ್ ಅಳವಡಿಸಿ ಪಟ್ಟಣದ ಬಹುತೇಕ ವಾರ್ಡುಗಳಿಗೆ ಇಲ್ಲಿಂದಲೇ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಾಮಾನ್ಯವಾಗಿ ದೊಡ್ಡಕೆರೆಯು ಒಂದು ಬಾರಿ ತುಂಬಿದರೆ ಪಟ್ಟಣದಲ್ಲಿ ಸುಮಾರು ಎರಡು ವರ್ಷಗಳ ಕಾಲ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂಬುದು ಪುರಸಭೆ ಅಧಿಕಾರಿಗಳ ಹಾಗೂ ಸಾರ್ವಜನಿಕರ ಲೆಕ್ಕಾಚಾರ.ಆದರೆ, ಬರಿದಾಗಿರುವ ದೊಡ್ಡಕೆರೆಯ ಒಡಲು ಈ ಲೆಕ್ಕಾಚಾರ ವನ್ನೇ ತಪ್ಪು ಮಾಡುವ ಆತಂಕ ಎದುರಾಗಿದೆ. ಪ್ರಸ್ತುತ ಕೆರೆಯು ಬರಿದಾಗಿದ್ದು, ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಇದರಿಂದ ಪಟ್ಟಣದ ಜನರಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಈ ನಡುವೆ ನಗರಾಭಿವೃದ್ಧಿ ಪ್ರಾಧಿಕಾರವು ₹9.40 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕೆರೆಯ ಅಭಿವೃದ್ಧಿ ಮುಂದಾಗಿರುವುದು ತುಸು ಸಮಾಧಾನ ತಂದಿದೆ. ಆದರೆ, ತ್ಯಾಜ್ಯಗಳಿಂದ ಕೆರೆಯ ಅಂಗಳವನ್ನು ಮುಚ್ಚುವ ಕೆಲಸ ಈಚೆಗೆ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂಬುದು ಈ ಭಾಗದ ರೈತರ ಆಗ್ರಹ.
ದೊಡ್ಡಕೆರೆಗೆ ನೀರು ಹರಿಯುವ ಮುಖ್ಯಕಾಲುವೆಯ ಮಧ್ಯಭಾಗದಲ್ಲೇ ಯುಜಿಡಿ ಯೋಜನೆಯಡಿ ಮ್ಯಾನ್ ಹೋಲ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ಮಳೆನೀರು ಹರಿದಹೋಗಲು ಅಡಚಣೆಯಾಗು ತ್ತಿದೆ. ಕಳೆದ ವರ್ಷ ಸುರಿದ ಮಳೆಯಲ್ಲಿ ತಾಲ್ಲೂಕಿನ ಬಹುತೇಕ ಎಲ್ಲ ಕೆರೆಗಳು ಭರ್ತಿಯಾಗಿದ್ದು. ಆದರೆ, ದೊಡ್ಡಕೆರೆಗೆ ಮಾತ್ರ ನೀರು ಹರಿದಿಲ್ಲ. ಕಾರಣ, ಕಾರಣ ಮಳೆ ನೀರು ಕೆರೆಗೆ ಹರಿಯುವ ಮುಖ್ಯ ಕಾಲುವೆಯ ಮಧ್ಯಭಾಗದಲ್ಲಿ ಮ್ಯಾನ್ ಹೋಲ್‌ಗಳನ್ನು ನಿರ್ಮಿಸಿರುವುದು. ಇದರಿಂದ ಮಳೆ ನೀರು, ಕೆರೆಗೆ ಹರಿಯಲು ಸಾಧ್ಯವಾಗುತ್ತಿಲ್ಲ. ಮುಖ್ಯ ಕಾಲುವೆಗಳಲ್ಲಿ ಕೆರೆಗೆ ಹರಿದರೆ ಮಾತ್ರ ಕೆರೆ ತುಂಬುತ್ತದೆ. ಇದರಿಂದ ಅಂರ್ತಜಲ ವೃದ್ಧಿಯಾಗಿ, ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ. ಇದರಿಂದ ಸುಮಾರು ಎರಡು-ಮೂರು ವರ್ಷಗಳು ಪಟ್ಟಣದ ಜನರಿಗೆ ಅನುಕೂಲ ಆಗುತ್ತದೆ. ಅದರಿಂದ ಸಂಬಂಧಪಟ್ಟ ಇಲಾಖೆ ಕೂಡಲೇ ಮ್ಯಾನ್ ಹೋಲ್‌ಗಳನ್ನು ಕಾಲುವೆ ಯಿಂದ ತೆರವುಗೊಳಿಸಿ ಕೆರೆಗೆ ನೀರು ಹರಿಯಲು ಅನುಕೂಲ ಕಲ್ಪಿಸಬೇಕಿದೆ.
