ಉದಯವಾಹಿನಿ, ಮೈಸೂರು: ರಾಜ್ಯದಲ್ಲಿ ಭೀಕರ ಪರಿಸ್ಥಿತಿಯಿದ್ದು, ಐದು ತಿಂಗಳಾದರೂ ಒಂದು ರೂಪಾಯಿ ಪರಿಹಾರ ನೀಡದಿರುವ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ರಾಜ್ಯದ ಜನರ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಉನ್ನತಾಧಿಕಾರ ಸಮಿತಿಗೆ ಅಮಿತ್ ಶಾ ಅವರೇ ಅಧ್ಯಕ್ಷರಾಗಿದ್ದು, ಸಭೆ ಮಾಡಿ ರಾಜ್ಯದ ಬರ ಪರಿಸ್ಥಿತಿಗೆ ಹಣ ಬಿಡುಗಡೆ ಮಾಡಬೇಕಿತ್ತು. ಅಕ್ಟೋಬರ್‍ನಿಂದ ಈವರೆಗೂ ರಾಜ್ಯಸರ್ಕಾರ ಮೂರು ಬಾರಿ ಮನವಿ ಸಲ್ಲಿಸಿದೆ. ಕೇಂದ್ರ ಅಧ್ಯಯನ ತಂಡವೊಂದು ಪರಿಶೀಲನೆ ನಡೆಸಿ, ವರದಿ ನೀಡಿದೆ.
ನಾನು ಡಿಸೆಂಬರ್ 19 ರಂದು ಪ್ರಧಾನಿಯವರನ್ನು, 20 ರಂದು ಅಮಿತ್ ಶಾರನ್ನು ಭೇಟಿ ಮಾಡಿದ್ದೆ. 23 ರಂದು ಉನ್ನತಾಧಿಕಾರ ಸಮಿತಿ ಸಭೆ ನಡೆಸಿ ಪರಿಹಾರ ನೀಡುವ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದರು.ಐದು ತಿಂಗಳಾದರೂ ಒಂದೂ ರೂಪಾಯಿ ಹಣ ನೀಡಿಲ್ಲ. ಅಮಿತ್ ಶಾ ಅವರೇನು ಅವರ ಮನೆಯಿಂದ ತಂದುಕೊಡುತ್ತಿದ್ದರೇ? ಅಥವಾ ರಾಜ್ಯಕ್ಕೆ ನೀಡುವ ಭಿಕ್ಷೆಯೇ? ನಮ್ಮ ತೆರಿಗೆಯ ಹಣವನ್ನು ನಮಗೇ ಕೊಡಲು ಹಿಂದೇಟು ಹಾಕುತ್ತಿರುವುದೇಕೆ? ಎಂದು ಕಿಡಿಕಾರಿದರು.ನಾವು ನಮ್ಮ ಪಾಲು ಕೇಳಿದರೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಬಿಜೆಪಿಯ ವಕ್ತಾರರಂತೆ ಸಮರ್ಥಿಸಿಕೊಳ್ಳುತ್ತಾರೆ. ರಾಜ್ಯದ ಮೇಕೆದಾಟು, ಮಹಾದಾಯಿ ಯೋಜನೆಗಳಿಗೆ ಅನುಮತಿ ನೀಡಿಲ್ಲ. ಹಣಕಾಸು ಆಯೋಗದ ಮಧ್ಯಂತರ ವರದಿಯ ಅನುಸಾರ ರಾಜ್ಯಕ್ಕೆ ಆರ್ಥಿಕ ನೆರವು ನೀಡಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅನ್ಯಾಯವಲ್ಲವೇ? ಮುಂದಿನ ಚುನಾವಣೆಯಲ್ಲಿ ಜನ ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮಂಡ್ಯದಲ್ಲಿ ತಾವು ಸ್ಪರ್ಧೆ ಮಾಡಿರುವುದು ದೇವರ ಇಚ್ಛೆ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಹಿಂದೆ ಮಗನನ್ನು ಕಣಕ್ಕಿಳಿಸಿದ್ದರಲ್ಲಾ ಅದು ಯಾರ ಇಚ್ಛೆ ಎಂದು ತಿರುಗೇಟು ನೀಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಮಗನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿತ್ತು ಎಂದು ಹೇಳುವ ಕುಮಾರಸ್ವಾಮಿ, ಮೈಸೂರಿನಲ್ಲಿ ಜೆಡಿಎಸ್‍ನವರು ಯಾರಿಗೆ ಚೂರಿ ಹಾಕಿದ್ದರು ಎಂದು ಹೇಳುತ್ತಾರೆಯೇ? ಒಂದು ವೇಳೆ ಮಂಡ್ಯದಲ್ಲಿ ನಾವು ಜೆಡಿಎಸ್‍ಗೆ ಚೂರಿ ಹಾಕಿದ್ದೇವೆ ಎಂಬ ಸಂಭವನೀಯತೆಯನ್ನು ಒಪ್ಪಿಕೊಳ್ಳುವುದಾದರೆ ಮೈಸೂರಿನಲ್ಲಿ ಜೆಡಿಎಸ್‍ನವರ ದ್ರೋಹವನ್ನು ಒಪ್ಪಿಕೊಳ್ಳಬೇಕಲ್ಲವೇ? ಎಲ್ಲಿಯೇ ಆದರೂ ಸಿದ್ಧಾಂತ ಒಂದೇ ಅಲ್ಲವೇ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!