ಉದಯವಾಹಿನಿ, ವಿಜಯಪುರ : ಸಮಾಜದ ಅಭಿವೃದ್ಧಿ, ಧರ್ಮ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳ ಪ್ರಚಾರ ಮತ್ತಿತರ ಕ್ಷೇತ್ರಗಳಲ್ಲಿ ಶ್ರೀ ಶಿವಕುಮಾರಸ್ವಾಮೀಜಿ ಅವರ ಸಾಧನೆಯು ಅನನ್ಯವಾದುದು. ೧೨ ನೇ ಶತಮಾನದ ಶಿವಶರಣರ ಧಾರ್ಮಿಕ ತತ್ವಗಳನ್ನು ತಾವು ನಿತ್ಯಜೀವನದಲ್ಲಿ ನಿಷ್ಟೆಯಿಂದ ಅನುಷ್ಟಾನಕ್ಕೆ ತಂದು ಸಮಾಜಕ್ಕೆ ಪಸರಿಸುವ ಮೂಲಕ ಪರಿಪೂರ್ಣಮೂರ್ತಿಯಾಗಿ ಅತಿಮಾನವರಾಗಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಳೂರು ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ಪಟ್ಟಣದ ಶ್ರೀ ನಗರೇಶ್ವರಸ್ವಾಮಿ ದೇವಾಲಯ ಪ್ರಾರ್ಥನಾಮಂದಿರದಲ್ಲಿ ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು, ಶ್ರೀ ವೀರಭದ್ರಸ್ವಾಮಿ ಗೋಷ್ಟಿ, ಅಕ್ಕನ ಬಳಗ ಸೇವಾಟ್ರಸ್ಟ್‌ಗಳ ವತಿಯಿಂದ ಹಮ್ಮಿಕೊಂಡಿದ್ದ ಸಂತರ ದಿನಾಚರಣೆ, ಶ್ರೀ ಶಿವಕುಮಾರಮಹಾಸ್ವಾಮೀಜಿ ಜನ್ಮದಿನಾಚರಣೆ, ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಶಿವಕುಮಾರಮಹಾಸ್ವಾಮೀಜಿ ಅವರು ಎಂದಿಗೂ ಆಧುನಿಕತೆಯ ಕಾಳಸರ್ಪದ ಕಡಿತಕ್ಕೆ ಒಳಗಾಗದೇ ಅಧಿಕಾರದಾಹ, ಒಡ್ಡೋಲಗ, ಅಟ್ಟಹಾಸ, ಆಡಂಬರದ ಲಾಂಚನಗಳಿಗೆ ಮನಕೊಡಲಿಲ್ಲ. ಆ ಮೂಲಕ ನಿರಪೇಕ್ಷ ಮತ್ತು ನಿಸ್ವಾರ್ಥದ ಸಮಾಜಸೇವೆಯನ್ನೇ ಗುರಿಯಾಗಿರಿಸಿಕೊಂಡು ಅಪಾರವಾದ ಜಾಗತಿಕ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಜಿಲ್ಲಾ ಶರಣಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರಹಡಪದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿನ ಎಲ್ಲಾ ದೋಷಗಳ ನಿವಾರಣೆಗೆ ಶರಣತತ್ವಗಳು, ವಚನಗಳು ಔಷಧಿಯಾಗಬಲ್ಲವು ಎಂದರು.
ಜಿಲ್ಲಾ ಕದಳಿವೇದಿಕೆಯ ಅಧ್ಯಕ್ಷೆ ಬಿ.ಸ್ವರ್ಣಗೌರಿ ಮಹದೇವ್ ಮಾತನಾಡಿ,ಶ್ರೀ ಶಿವಕುಮಾರಸ್ವಾಮೀಜಿ ನಡೆದಾಡುವ ದೇವರೆನಿಸಿಕೊಂಡಿದ್ದಾರೆ ಎಂದರು.
