ಉದಯವಾಹಿನಿ, ಕೆಂಗೇರಿ : ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಜಾಮೂನು, ಮೈಸೂರು ಪಾಕು, ಜಿಲೇಬಿ ಕೊಡ್ತಾರೆ ಅವರ ಕೆಲಸ ಆದ್ಮೇಲೆ ವಿಷ ಕೊಡುತ್ತಾರೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರ ಶಾಸಕ ಎಸ್. ಟಿ.ಸೋಮಶೇಖರ್ ಕೆಂಗೇರಿ ಉಪನಗರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾವುಕರಾಗಿ ನುಡಿದರು.
ಬಿಜೆಪಿ ನಾಯಕರು ಕದ್ದು ಮುಚ್ಚಿ ರಾತ್ರಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರ ಭೇಟಿಯಾಗುತ್ತಾರೆ ಆದರೆ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ರಾಜಾ ರೋಷವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭೇಟಿ ಮಾಡಿದರೆ ಅದನ್ನೇ ದೊಡ್ಡದು ಮಾಡುತ್ತಾರೆ ಎಂದು ದೂರಿದರುರಾಜ್ಯಸಭೆಯಲ್ಲಿ ಅಡ್ಡ ಮತದಾನದ ವಿಚಾರವನ್ನು ದೊಡ್ಡದು ಮಾಡಿ ಬೀದಿಯಲ್ಲಿ ಪ್ರತಿಭಟನೆ ನಡೆಸಿ ನನ್ನ ಮಾನ ,ಸ್ವಾಭಿಮಾನಕ್ಕೆ ಧಕ್ಕೆ ಮಾಡಿದವರೊಂದಿಗೆ ನಾನು ಹೇಗೆ ಹೋಗಲಿ ಎಂದು ತಿಳಿಸಿದರು. ಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಗುರಿಯಾಗಿದ್ದು ಅದಕ್ಕಾಗಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ ಅದಕ್ಕಾಗಿ ಯಾರಿಗೂ ಅಂಜುವ ಪ್ರಶ್ನೆಯೇ ಇಲ್ಲ ಎಂದರು. ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ನಾನು ಮಾಡಿದ ಬಹುದೊಡ್ಡ ತಪ್ಪು ಎಂದು ಇಂದು ನನಗನ್ನಿಸಿದೆ ಎಂದರು.
ನೆಲಮಂಗಲದ ಶಾಸಕ ಎನ್. ಶ್ರೀನಿವಾಸ್ ಮಾತನಾಡಿದರು. ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜೀವ ಗೌಡ, ಪಶ್ಚಿಮ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಎಂ ರಾಜಕುಮಾರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ಮಾಜಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಭೆ ಆರಂಭಕ್ಕೂ ಮುನ್ನ ಮಾಜಿ ಉಪ ಪ್ರಧಾನಿ ಜಗಜೀವನ ರಾಮ್ ಅವರ ೧೧೭ ಹುಟ್ಟುಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
