ಉದಯವಾಹಿನಿ, ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನಿ ಅಸ್ತ್ರದ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಇತಿಹಾಸ ಸೃಷ್ಟಿಸಿದ್ದ ಸುಮಲತ ಅಂಬರೀಶ್ ಇಂದು ವಿಧ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಸುಮಲತ ಅಂಬರೀಶ್ ಜೊತೆಗೆ ಮಾಜಿ ಲೋಕಸಭಾ ಸದಸ್ಯ ಎಲ್.ಆರ್.ಶಿವರಾಮೇಗೌಡ ಹಾಗೂ ಸುಮಲತ ಅಂಬರೀಶ್ ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರ ಸಮ್ಮುಖದಲ್ಲಿ ಕೇಸರಿ ಶಾಲು ಹೊದ್ದ ಸುಮಲತ ಅಂಬರೀಶ್ ಹಾಗೂ ಬೆಂಬಲಿಗರು ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು.
ಅವರ ಸೇರ್ಪಡೆಯಿಂದಾಗಿ ಹಳೇ ಮೈಸೂರು ಭಾಗದಲ್ಲಿ(ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ) ಬಿಜೆಪಿಗೆ ಹೆಚ್ಚಿನ ಶಕ್ತಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಪಕ್ಷ ಸೇರ್ಪಡೆಗೂ ಮುನ್ನ ಸುಮಲತ ಹಾಗೂ ಅವರ ಬೆಂಬಲಿಗರು ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ಪಕ್ಷ ಸೇರ್ಪಡೆಗೂ ಮುನ್ನ ಸುಮಲತ ಹಾಗೂ ಅವರ ಬೆಂಬಲಿಗರು ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಶ್ ಅವರ ಸಮಾಗೆ ಪೂಜೆ ಸಲ್ಲಿಸಿದರು.
ನಂತರ ನೇರವಾಗಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು.ಈ ವೇಳೆ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಕಚೇರಿಗೆ ಆಗಮಿಸುತ್ತಿದ್ದಂತೆ ಜೈಕಾರದ ಘೋಷಣೆಗಳು ಮೊಳಗಿದವು. ಬಿಜೆಪಿ ಸೇರುವ ಮುನ್ನ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಸುಮಲತ ಅಂಬರೀಶ್ ಭಾವನಾತ್ಮಕವಾದ ಸಂದೇಶವನ್ನು ಪೋಸ್ಟ್ ಮಾಡಿದ್ದರು.
ಮಂಡ್ಯದ ಅಭಿವೃದ್ಧಿಯನ್ನೇ ನನ್ನ ಮೂಲ ಮಂತ್ರವಾಗಿಸಿಕೊಂಡು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದೆ. ಅದರಂತೆಯೇ, ಬಿಜೆಪಿ ನಾಯಕರ ಸಮ್ಮುಖದಲ್ಲಿ ಏಪ್ರಿಲ್ 5ರ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಆಗುತ್ತಿರುವೆ.
