ಉದಯವಾಹಿನಿ, ಬೆಂಗಳೂರು: ಕಟ್ಟಡ ನಿರ್ಮಾಣದ ಕಾರ್ಮಿಕರು ಸಿಕ್ತಿಲ್ಲ… ಕೂಲಿ ಕಾರ್ಮಿಕರು ಬರ್ತಿಲ್ಲ…ದಿನಗೂಲಿ ಕೆಲಸದವರೂ ಕೂಡ ಕೈಗೆ ಸಿಗ್ತಾಯಿಲ್ಲ….ಬಹುತೇಕ ಮಂದಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರದ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ತಮ್ಮ ತಮ್ಮ ಪಕ್ಷಗಳ ಪ್ರಚಾರಕ್ಕಾಗಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರನ್ನು ಕರೆದೊಯ್ಯುತ್ತಿರುವುದಕ್ಕೆ ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮತ್ತಿತರ ಕೆಲಸಗಳಿಗೆ ಸಧ್ಯ ಕಾರ್ಮಿಕರು ಸಿಗುತ್ತಿಲ್ಲ. ಗಾರೆ ಕೆಲಸ, ಇಟ್ಟಿಗೆ ಕೆಲಸ, ಸಿಮೆಂಟ್ ಕಾಂಕ್ರೀಟ್ ಕೆಲಸ, ಪೇಂಟರ್, ಕಾರ್ಪೇಂಟರ್ಗಳ ಹೆಲ್ಪರ್ಗಳಿಗೆ ದಿನವೊಂದಕ್ಕೆ 500 ರೂ. ಸಂಬಳ ಸಿಗುತ್ತಿದೆ.
ಪ್ರಸ್ತುತ ರಾಜಕೀಯ ಪಕ್ಷಗಳ ಬೆಂಬಲಿಗರು ಈ ಮಂದಿಯನ್ನು ಕರೆದೊಯ್ದು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು 500 ರಿಂದ 1000 ರೂ. ಗಳವರೆಗೆ ಕೂಲಿ ನೀಡುತ್ತಿದ್ದಾರೆ. ಹೀಗಾಗಿ ಮೂರು ವಾರಗಳಿಂದ ಈ ವರ್ಗದ ಬಹುತೇಕ ಜನ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯಕ್ಕೆ ತೆರಳುತ್ತಿದ್ದಾರೆ.
ಗಲ್ಲಿ ಗಲ್ಲಿಗಳಲ್ಲಿ ಪ್ರಚಾರ ನಡೆಸಿ, ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಬೇಕು. ಪ್ರತಿದಿನ ಇಂತಿಷ್ಟು ಮನೆಗಳಿಗೆ ಕರ ಪತ್ರಗಳನ್ನು ಹಂಚಬೇಕು. ಬೆಳಗ್ಗೆಯಿಂದ ಸಂಜೆ ವರೆಗೆ ಮನೆ ಮನೆಗೆ ಕರಪತ್ರ ಹಂಚಿದರೆ ಸಂಜೆ ಅಂದಿನ ಬಟವಾಡೆ ಸಿಗುತ್ತದೆ.ಎರಡರಿಂದ ಮೂರು ವಾರ ಶ್ರಮವಿಲ್ಲದ ಕೆಲಸವೆಂಬುದನ್ನು ಅರಿತು ಬಹಳಷ್ಟು ಕಾರ್ಮಿಕರು ಪ್ರಚಾರ ಕಾರ್ಯಕ್ಕೆ ತೆರಳಿರುವುದರಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ನಗರ, ಪಟ್ಟಣ ಪ್ರದೇಶಗಳಲ್ಲಿ ಕಾರ್ಮಿಕರ ಕೊರತೆ ಕಾಡುತ್ತಿದೆ.
