ಉದಯವಾಹಿನಿ, ಬೆಂಗಳೂರು: ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಏ.26ರಂದು ಮತದಾನ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಇಂದಿಲ್ಲಿ ತಿಳಿಸಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆಯ ಅಂಗವಾಗಿ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೆರೆಯ ತಮಿಳುನಾಡಿನಲ್ಲಿ ಏ.19ರಂದು ಮತದಾನ ನಡೆಯಲಿದೆ. ಈಗಾಗಿ ಏ.17ರಿಂದಲೇ ತಮಿಳುನಾಡು ಗಡಿಯನ್ನು ಸೀಜ್ ಮಾಡಲಾಗುವುದು.
ಅದೇ ರೀತಿ ಕರ್ನಾಟಕದಲ್ಲಿ ಮತದಾನ ನಡೆಯುವ ಎರಡು ದಿನಗಳ ಮುನ್ನ ತಮಿಳುನಾಡು ಅವರು ಗಡಿಯನ್ನು ಸೀಜ್ ಮಾಡಲಿದ್ದಾರೆ. ತಮಿಳುನಾಡಿನಲ್ಲಿ ನಿಯೋಜಿತರಾಗಿರುವ ಕೇಂದ್ರ ಪಡೆಗಳು ರಾಜ್ಯಕ್ಕೆ ಆಗಮಿಸಲಿವೆ. ಜಿಲ್ಲಾ ಎಸ್ಪಿ ಹಾಗೂ ಪೊಲೀಸ್ ವೀಕ್ಷಕರು ಸಮಾಲೋಚನೆ ನಡೆಸಿ ಅಗತ್ಯ ಪ್ರದೇಶಗಳಿಗೆ ನಿಯೋಜನೆ ಮಾಡುತ್ತಾರೆ. ಆಯಾ ಕ್ಷೇತ್ರಗಳಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ. ಚುನಾವಣಾ ಅಕ್ರಮ ತಡೆಯುವುದು ಇದರ ಉದ್ದೇಶವಾಗಿದೆ ಎಂದರು.

ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುವ 14 ಕ್ಷೇತ್ರಗಳಲ್ಲಿ 2.88 ಕೋಟಿ ಮತದಾರರಿದ್ದಾರೆ. 11 ಸಾವಿರ ಸೇವಾ ಮತದಾರರಿದ್ದಾರೆ. 1.44 ಕೋಟಿ ಪುರುಷ, 1.43 ಮಹಿಳಾ ಹಾಗೂ 5.99 ಲಕ್ಷ ಯುವ ಮತದಾರರಿದ್ದಾರೆ, ನಿನ್ನೆಯಿಂದ ನೋಂದಾಯಿತ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು ಮತದಾನವನ್ನು ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಏ.18ರ ವರೆಗೂ ಈ ಪ್ರಕ್ರಿಯೆ ನಡೆಯಲಿದೆ ಎಂದರು .30, 602 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮತದಾನಕ್ಕೆ ಅನುಕೂಲವಾಗುವಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿವುದು. ಶೇ.50ರಷ್ಟು ಮತಗಟ್ಟೆಗಳಲ್ಲಿ ಮತದಾನವನ್ನು ವೆಬ್ ಕಾರ್ಪಿಂಗ್ ಮಾಡಲಾಗುವುದು ಎಂದರು.ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ 24*7 ಮೂರು ಪಾಳಿಯಲ್ಲಿ ವಿವಿಧ ತಂಡಗಳು ಕಾರ್ಯನಿರ್ವಹಿಸುತ್ತಿವೆ.

Leave a Reply

Your email address will not be published. Required fields are marked *

error: Content is protected !!