ಉದಯವಾಹಿನಿ, ಬೆಂಗಳೂರು : ಈ ಬಾರಿಯ ಲೋಕಸಭೆ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ಗೆ ಮಾತ್ರ ಪ್ರತಿಷ್ಠೆಯಾಗಿರದೆ ರಾಜ್ಯದ ಎರಡು ಪ್ರಬಲ ರಾಜಕೀಯ ಕುಟುಂಬ ಗಳಿಗೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.ರಾಜಕೀಯವನ್ನೇ ಅರಗಿಸಿಕೊಂಡಿರುವ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ರೈತ ಹೋರಾಟದ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿ ರಾಜಕೀಯ ನಿವೃತ್ತಿ ಅಂಚಿನಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಲೋಕಸಭೆ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.ಒಂದು ವೇಳೆ ಈ ಚುನಾವಣೆಯಲ್ಲಿ ದೇವೇಗೌಡ ಮತ್ತು ಯಡಿಯೂರಪ್ಪ ಕುಟುಂಬಕ್ಕೆ ಅಪ್ಪಿತಪ್ಪಿಯೂ ಸ್ವಲ್ಪವೇನಾ ದರೂ ಹಿನ್ನಡೆಯಾದರೆ ಎರಡೂ ಕುಟುಂಬಗಳ ರಾಜಕೀಯ ಭವಿಷ್ಯಕ್ಕೆ ಕಲ್ಲು ಬೀಳುವುದರಲ್ಲಿ ಸಂಶಯವಿಲ್ಲ ಎಂದು ಇಬ್ಬರನ್ನೂ ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ.ಹೀಗಾಗಿಯೇ ದೇವೇಗೌಡ ಮತ್ತು ಯಡಿಯೂರಪ್ಪ ತಮ್ಮ ರಾಜಕೀಯ ಜಿದ್ದನ್ನು ಮರೆತು ಪರಸ್ಪರ ಒಂದಾಗಿ ಹೆಗಲಿಗೆ ಹೆಗಲು ಕೊಟ್ಟು ಮೈತ್ರಿಯಾಗಿರುವುದು ಹೊಸ ಬೆಳವಣಿಗೆಯಾಗಿದೆ.

ಇತ್ತೀಚಿನ ಚುನಾವಣೆಗಳಲ್ಲಿ ಎಚ್ಡಿ ದೇವೇಗೌಡ ಅವರ ನೇತೃತ್ವದ ಜೆಡಿಎಸ್ ಕಳಪೆ ಸಾಧನೆ ಮಾಡಿದ್ದು, ಈ ಚುನಾವಣೆ ಕೂಡ ಕೈ ಕೊಟ್ಟರೆ ದೇವೇಗೌಡರ ಕುಟುಂಬದ ರಾಜಕೀಯ ಹಿಡಿತ ಮತ್ತಷ್ಟು ಸಡಿಲಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. 2004ರಲ್ಲಿ 58 ಶಾಸಕರನ್ನು ಹೊಂದಿದ್ದ ಜೆಡಿಎಸ್ ಈಗ ಕೇವಲ 19 ಶಾಸಕರು ಹಾಗೂ ಏಕೈಕ ಸಂಸದ ಸ್ಥಾನಕ್ಕೆ ಇಳಿದಿದೆ. ಜೆಡಿಎಸ್ನ ಅಧಃಪತನಕ್ಕೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಪ್ರಮುಖ ಕಾರಣ. 2023ರ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಗಣನೀಯವಾಗಿ ಕಾಂಗ್ರೆಸ್ ಕಡೆ ತಿರುಗಿಸುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಅಗ್ರೆಸ್ಸಿವ್ ಆಗಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುತ್ತಿದ್ದಾರೆ. ಒಕ್ಕಲಿಗ ಮುಖಂಡರ ಜೊತೆ ರಹಸ್ಯ ಸಭೆಗಳನ್ನು ನಡೆಸುತ್ತಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ದೇವೇಗೌಡರ ಕುಟುಂಬದ ಪ್ರಾಬಲ್ಯದಿಂದ ತಮ್ಮನ್ನು ತಾವು ಮುಕ್ತಗೊಳಿಸಬೇಕಾದ ಅಗತ್ಯವನ್ನು ಒಕ್ಕಲಿಗ ಮುಖಂಡರ ಮುಂದೆ ಪ್ರತಿಪಾದಿಸುತ್ತಿದ್ದಾರೆ. ಜೊತೆಗೆ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ನ ಮೂಲಗಳು ಹೇಳಿವೆ.

 

Leave a Reply

Your email address will not be published. Required fields are marked *

error: Content is protected !!