ಉದಯವಾಹಿನಿ , ಬೆಂಗಳೂರು :  ಲೋಕಸಭಾ ಮಹಾಸಮರ ದಲ್ಲಿ ರಾಜ್ಯದ ಮೊದಲ ಅಧ್ಯಾಯಕ್ಕೆ ಬಹಿರಂಗ ಪ್ರಚಾರ ಇನ್ನು ಮೂರು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳೂ ರಣಕಣದಲ್ಲಿ ಆರ್ಭಟಿಸುತ್ತಿದ್ದು, ಮತದಾರರ ಮನಸ್ಸು ಗೆಲ್ಲಲು ಬೆವರಿಳಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಕೆಲವು ಕಡೆ ಸಣ್ಣಪುಟ್ಟ ಮಳೆಯಾಗಿದ್ದರೂ ಬಿಸಿಲಿನ ಝಳ ತಗ್ಗಿಲ್ಲ.
ಬೇಸಿಗೆಯ ಉಷ್ಣಾಂಶಕ್ಕಿಂತಲೂ ರಾಜಕೀಯದ ಕಾವು ದಿನೇದಿನೇ ಏರುತ್ತಿದೆ. ಏ.24 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುವುದರಿಂದಾಗಿ ಪ್ರತಿಯೊಬ್ಬ ನಾಯಕರೂ ತಮಗೆ ನಿಯೋಜಿಸಿದ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿ ನಿನ್ನೆ ರಾಜ್ಯಕ್ಕೆ ಭೇಟಿ ನೀಡಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿ ತೆರಳಿದ್ದಾರೆ.ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದು,ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪರವಾಗಿ ಮತ ಯಾಚಿಸಲಿದ್ದಾರೆ. ಜೊತೆಗೆ ಇತ್ತೀಚೆಗಷ್ಟೇ ಕೊಲೆಯಾದ ನೇಹಾ ಹಿರೇಮಠ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.
ಕಾಂಗ್ರೆಸ್ ಸರ್ಕಾರ ಚೊಂಬು ಜಾಹೀರಾತಿನ ಮೂಲಕ ಬಿಜೆಪಿಗೆ ಮುಜುಗರ ಉಂಟುಮಾಡಿದ್ದು, ಇದಕ್ಕೆ ಇಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಪತ್ರಿಕಾಗೋಷ್ಠಿ ನಡೆಸಿ ಠಕ್ಕರ್ ನೀಡಿದ್ದಾರೆ.ಯಡಿಯೂರಪ್ಪ ಅವರು ಪತ್ರಿಕಾಗೋಷ್ಠಿಯ ಬಳಿಕ ವಿಶ್ರಾಂತಿ ಪಡೆಯದೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ತೆರಳಲಿದ್ದು, ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಪ್ರವಾಸ ಬೆಳೆಸಲಿದ್ದಾರೆ. ಎರಡೂ ಕಡೆ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚನೆ ನಡೆಸಲಿದ್ದಾರೆ.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರವಾಗಿ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪರವಾಗಿ ಮತಪ್ರಚಾರ ನಡೆಸಲಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!