ಉದಯವಾಹಿನಿ ,ಬೆಂಗಳೂರು: ಪ್ರಸಕ್ತ ಲೋಕಸಭಾ ಚುನಾವಣೆ ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಹಣ, ಉಚಿತ ಉಡುಗೊರೆಗಳ ಜಪ್ತಿ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮಾ.16 ರಿಂದ ಇಲ್ಲಿಯವರೆಗೆ ಒಟ್ಟು 402.39 ಕೋಟಿ ರೂ. ಮೊತ್ತದ ನಗದು, ಚಿನ್ನಾಭರಣ, ಮದ್ಯ, ಡ್ರಗ್ಸ್, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ಇದುವರೆಗೂ ಅತೀ ಹೆಚ್ಚು ಮದ್ಯವನ್ನೇ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಮದ್ಯದ ಮೌಲ್ಯ 177 ಕೋಟಿ ರೂ. ದಾಟಿದೆ. 75.31 ಕೋಟಿ ರೂ. ನಗದು, 10.73 ಕೋಟಿ ರೂ. ಡ್ರಗ್ಸ್, 57.67 ಕೋಟಿ ರೂ. ಮೌಲ್ಯದ ಚಿನ್ನ, 1.18 ಕೋಟಿ ರೂ. ಮೌಲ್ಯದ ಬೆಳ್ಳಿ, 9 ಲಕ್ಷ ರೂ. ಮೌಲ್ಯದ ವಜ್ರ, 72.27 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್, ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ನಡೆಸಿದ ತಪಾಸಣೆ ಸಂದರ್ಭದಲ್ಲಿ 132.17 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ, ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಅಬಕಾರಿ ಇಲಾಖೆಯವರು ನಡೆಸಿದ ತಪಾಸಣೆ ಸಂದರ್ಭದಲ್ಲಿ 176.59 ಕೋಟಿ ರೂ. ಮೌಲ್ಯದ ಮದ್ಯ, ಡ್ರಗ್ಸ್ ವಶಪಡಿಸಿಕೊಂಡಿದ್ದರೆ, ಆದಾಯ ತೆರಿಗೆ ಇಲಾಖೆಯವರು ನಡೆಸಿದ ತಪಾಸಣೆ ಸಂದರ್ಭದಲ್ಲಿ 13.80 ಕೋಟಿ ರೂ. ಮೌಲ್ಯದ ನಗದು, ಚಿನ್ನ, ಬೆಳ್ಳಿ, ವಜ್ರವನ್ನು ವಶಪಡಿಸಿಕೊಂಡಿದ್ದರೆ, ವಾಣಿಜ್ಯ ತೆರಿಗೆ ಇಲಾಖೆಯವರು ನಡೆಸಿದ ತಪಾಸಣೆ ಸಂದರ್ಭದಲ್ಲಿ 79.83 ಕೋಟಿ ರೂ. ಮೊತ್ತದ ಚಿನ್ನ, ಬೆಳ್ಳಿ, ಉಚಿತ ಉಡುಗೊರೆ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!