ಉದಯವಾಹಿನಿ, ಕಲಬುರಗಿ: ನಗರದ ಸೇಡಂ ರಸ್ತೆಯ ಸುಮಾ ಹೋಟೆಲ್ ಹತ್ತಿರ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅಂಬ್ಯುಲೆನ್ಸ್‍ನಲ್ಲಿ ಹಾಕಿಕೊಂಡು ಬರುವಾಗ ಅಂಬ್ಯುಲೆನ್ಸ್ ತಡೆದು ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಲ್ತಾನಪುರ ಫಿಲ್ಟರ್‍ಬೆಡ್ ನಿವಾಸಿ ಅಂಬರೀಶ ವಿದ್ಯಾಸಾಗರ ರಾಗಿ ಎಂಬುವವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸಂತೋಷ ಕಾಳಗಿ ಮತ್ತು ಇತರ ಮೂವರು ತಮ್ಮ ಮೇಲೆ ಮತ್ತು ಅಂಬ್ಯುಲೆನ್ಸ್ ಚಾಲಕ ಪ್ರಭುಲಿಂಗ ತಾವರಖೇಡ ಮೇಲೆ ಹಲ್ಲೆ ನಡೆಸಿ ಪ್ರಭುಲಿಂಗ ತಾವರಖೇಡ ಅವರ ಕೊರಳಲ್ಲಿದ್ದ 5 ಗ್ರಾಂ.ಬಂಗಾರದ ಚೈನ್ ಕಸಿದುಕೊಂಡಿದ್ದಾರೆ. ಅಲ್ಲದೆ ಕಲ್ಲನಿಂದ ಅಂಬ್ಯುಲೆನ್ಸ್ ಗ್ಲಾಸ್ ಒಡೆದು 15 ಸಾವಿರ ರೂಪಾಯಿ ಹಾನಿ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
