ಉದಯವಾಹಿನಿ, ಬೆಂಗಳೂರು: ವಿಧಾನ ಪರಿಷತ್ತಿನ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೇ ತೀರ್ಮಾನ ಮಾಡುತ್ತಿರುವುದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಸಮಾಧಾನ ಹೊರ ಹಾಕಿದ್ದಾರೆ.
ಅಭ್ಯರ್ಥಿಗಳ ಆಯ್ಕೆಯನ್ನು ಅವರಿಬ್ಬರೇ ತೀರ್ಮಾನ ಮಾಡುವುದು ಸರಿ ಹೋಗುವುದಿಲ್ಲ. ಪಕ್ಷದ ಹಿರಿಯರ ಸಲಹೆ, ಅಭಿಪ್ರಾಯಗಳನ್ನು ಕೇಳಬೇಕು ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಪಕ್ಷದಲ್ಲಿ ಅನೇಕ ವರ್ಷ ದುಡಿದ ನಾಯಕರ ಸಲಹೆ ಪಡೆಯಬೇಕು. ಜಾತಿ ವಾರು, ಪ್ರಾದೇಶಿಕವಾರು ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡಬೇಕು. ಯಾರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಬೇಕು ಎಂಬ ಬಗ್ಗೆ ಹಿರಿಯರ ಜತೆ ಚರ್ಚಿಸುವುದು ಸೂಕ್ತ. ಸಿಎಂ, ಡಿಸಿಎಂ ತೀರ್ಮಾನ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಡಿ.ಕೆ. ಶಿವಕುಮಾರ್ ರವರೇ ಇರಲಿ ಎಂದರೆ ಅವರೇ ಇರುತ್ತಾರೆ. ಬೇರೆಯವರು ಬರಲಿ ಎಂದು ಹೈಕಮಾಂಡ್ ಬಯಸಿದರೆ ಬೇರೆಯವರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಅವರು ಮಾರ್ಮಿಕವಾಗಿ ನುಡಿದರು.
