ಉದಯವಾಹಿನಿ,ಬೆಂಗಳೂರು: ವಿಧಾನಪರಿಷತ್ ಸದಸ್ಯರ ಆಯ್ಕೆ ವಿಚಾರದಲ್ಲಿ ಹಿರಿಯರು ಹಾಗೂ ಅನುಭವಿಗಳ ಜೊತೆ ಸಮಾಲೋಚನೆ ನಡೆಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಅಸಮಾಧಾನ ಹೊರಹಾಕಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರು ನಮ್ಮನ್ನೂ ಸೇರಿದಂತೆ ಪಕ್ಷದ ಹಿರಿಯರ ಜೊತೆ ಚರ್ಚೆ ಮಾಡಬೇಕು. ಪಕ್ಷ ಹಾಗೂ ಸರ್ಕಾರದಲ್ಲಿ ಕೆಲಸ ಮಾಡಿದವರ ಸಂಪರ್ಕದಲ್ಲಿರುವವರ ಬಗ್ಗೆ ಚರ್ಚೆ ಮಾಡಬೇಕು. ಇದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ.
ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಪಕ್ಷದಲ್ಲಿ ಅನೇಕ ಜವಾಬ್ದಾರಿ ನಿಭಾಯಿಸಿ ಅನುಭವಿಗಳಾಗಿರುವವರ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳಬೇಕು. ಜಿಲ್ಲಾವಾರು, ಜಾತಿವಾರು ಹಾಗೂ ಪಕ್ಷ ಸಂಘಟನೆಯಲ್ಲಿ ಸಹಾಯ ಮಾಡಿದವರು ಯಾವ ಜಾತಿ ಕಾಂಗ್ರೆಸ್ ಜೊತೆ ದೃಢವಾಗಿ ನಿಂತಿದೆ ಎಂಬುದನ್ನು ನಮೊಂದಿಗೆ ಚರ್ಚೆ ಮಾಡಬೇಕಿದೆ. ಏಕಾಏಕಿ ಇಬ್ಬರೇ ಕುಳಿತು ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.
ಬಿಜೆಪಿಯವರು ಯಾವುದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಲಿ, ಅದು ಅವರ ಹಕ್ಕು. ಅವರ ಟೀಕೆಗಳಿಗೆ ನಾವು ಸರಿಯಾದ ಉತ್ತರ ನೀಡುತ್ತೇವೆ ಎಂದು ಹೇಳಿದರು.ಸರ್ಕಾರದ ಸಚಿವರು ಪಕ್ಷದ ಕಚೇರಿಗೆ ಭೇಟಿ ನೀಡಬೇಕು. ಜಿಲ್ಲಾ ಪ್ರವಾಸದಲ್ಲೂ ಜಿಲ್ಲಾ ಕಾಂಗ್ರೆಸ್ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಮುಖಂಡರ ಜೊತೆ ಚರ್ಚೆ ಮಾಡಬೇಕು ಎಂಬುದು ಹೊಸದಲ್ಲ. ಈ ಹಿಂದೆ ನಾನು ಎಂಟು ವರ್ಷ ಪಕ್ಷದ ಅಧ್ಯಕ್ಷನಾಗಿದ್ದಾಗ ಇದೇ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ಸಚಿವರು ಪಕ್ಷದ ಕಚೇರಿಯತ್ತ ಬರುತ್ತಿರಲಿಲ್ಲ ಎಂಬುದನ್ನು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಮನಿಸಿದ್ದಾರೆ. ನಿನ್ನೆ ಒಳ್ಳೆಯ ಸೂಚನೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಡಿ.ಕೆ.ಶಿವಕುಮಾರ್ ಅವರನ್ನು ಬದಲಾಯಿಸಬೇಕು ಎಂದರೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಲ್ಲವಾದರೆ ಮುಂದುವರೆಸುತ್ತಾರೆ. ನಾನು ಎಂಟು ವರ್ಷ ಅಧ್ಯಕ್ಷನಾಗಿದ್ದೆ. ಎರಡು ಬಾರಿ ಚರ್ಚೆಗಳು ಬಂದಾಗಲಾದರೂ ಬದಲಾವಣೆ ಮಾಡದೇ ಮುಂದುವರೆಸಲಾಗಿತ್ತು. ಈಗಲೂ ಅದೇ ರೀತಿ ಹೈಕಮಾಂಡ್ ನಿರ್ಧರಿಸುತ್ತಿದೆ.
