ಉದಯವಾಹಿನಿ, ಮೈಸೂರು: ರೋಗಿಯ ಸಹೋದರನ ಬಳಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಕೃಷ್ಣರಾಜೇಂದ್ರ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಪುಟ್ಟಸ್ವಾಮಿಗೆ ಮೈಸೂರಿನ 3ನೇ ಅಪರ ಜಿಲ್ಲಾ ಸತ್ರ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯ 4 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ಶಿವಕುಮಾರ್‌ ಎಂಬುವವರು 2017 ರಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೆ.ಆರ್‌.ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಅವರ ಶಸ್ತ್ರಚಿಕಿತ್ಸೆಗೆ ಮೂಳೆ ಶಸ್ತ್ರತಜ್ಞರಾದ ಡಾ.ಪುಟ್ಟಸ್ವಾಮಿ 40 ಸಾವಿರ ರೂ. ಲಂಚ ನೀಡುವಂತೆ ರೋಗಿಯ ಸಹೋದರ ಸಂಬಂಧಿ ದೇವರಾಜ್‌ ಬಳಿ ಕೇಳಿದ್ದರು. ಹಣ ನೀಡುವ ವಿಚಾರದಲ್ಲಿ ವೈದ್ಯರ ಬಳಿ ಮಾತನಾಡಿರುವುದನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಳ್ಳಲಾಗಿತ್ತು.ದೇವರಾಜ್‌ ಆರಂಭದಲ್ಲಿ 2 ಸಾವಿರ ಹಣ ನೀಡಿದ್ದರು. ಬಳಿಕ ಬಾಕಿ ಹಣ ನೀಡುವ ಮುನ್ನ ಎಸಿಪಿ ಪೊಲೀಸರಿಗೆ ದೂರು ನೀಡಿದ್ದರು. ಮತ್ತೆ 26 ಸಾವಿರ ರೂ.ಗಳನ್ನು ಡಾ.ಪುಟ್ಟಸ್ವಾಮಿಗೆ ನೀಡುತ್ತಿರುವಾಗ ಎಸಿಪಿ ಪೊಲೀಸರು ಕಾರ್ಯಾಚರಣೆ ನಡೆಸಿ ವೈದ್ಯರನ್ನು ಬಂಧಿಸಿದ್ದರು. ಎಸಿಪಿ ಇನ್‌್ಸಪೆಕ್ಟರ್‌ ಶೇಖರ್‌ ಅವರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ್ಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಜಿಲ್ಲಾ ಸತ್ರ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯ ಅವರು ವೈದ್ಯರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 4 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!