ಉದಯವಾಹಿನಿ, ಬೆಂಗಳೂರು: ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಸಚಿವ ನಾಗೇಂದ್ರ ಅವರಿಂದ ನಾವು ರಾಜೀನಾಮೆ ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸಚಿವ ನಾಗೇಂದ್ರ ಅವರು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಪಡೆಯುತ್ತಿಲ್ಲ ಎಂದು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಕೋಟಾ ಶ್ರೀನಿವಾಸ್‌‍ ಅವರ ಹೇಳಿಕೆಗೆ ವಿಧಾನಸೌಧದಲ್ಲಿಂದು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಯಾವ ಬೆದರಿಕೆಗಳೂ ಇಲ್ಲ. ನಾವು ರಾಜೀನಾಮೆ ಕೇಳಿಯೇ ಇಲ್ಲ ಎಂದರು.ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ತನಿಖೆಗೆ ಮೊನ್ನೆಯಷ್ಟೇ ಎಸ್‌‍ಐಟಿ ರಚನೆ ಮಾಡಲಾಗಿದೆ. ಇನ್ನೂ ಯಾವುದೇ ವರದಿ ಬಂದಿಲ್ಲ. ಪ್ರಾಥಮಿಕ ವರದಿ ಬರಲಿ. ಅದರಲ್ಲಿ ಏನಿರುತ್ತದೆ ಎಂದು ನೋಡಿದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾಗೇಂದ್ರ ಅವರಿಂದ ತಾವು ಯಾವುದೇ ವಿವರಣೆ ಕೇಳಿಲ್ಲ, ವರದಿ ಬರುವವರೆಗೂ ಕಾಯುತ್ತೇವೆ ಎಂದರು.
ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಜೂ.6ರವರೆಗೆ ಗಡುವು ನೀಡುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಅವರ್ಯಾರು ನಮಗೆ ಗಡುವು ನೀಡಲು? ಎಂದು ಪ್ರಶ್ನಿಸಿದರು.ವಿರೋಧಪಕ್ಷಗಳಿರುವುದೇ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕೆಂದು. ಆದರೆ ಸುಳ್ಳು ಹೇಳಿಕೊಂಡು ಹೋರಾಟ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಬಗ್ಗೆ ರಾಹುಲ್‌ಗಾಂಧಿಯವರು ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಅದು ನರೇಂದ್ರ ಮೋದಿಯವರ ಮಾಧ್ಯಮ ಸಮೀಕ್ಷೆ ಎಂದು ಹೇಳಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್‌‍ ಕನಿಷ್ಠ 15 ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ. ಸಮೀಕ್ಷೆಯನ್ನು ನಾವು ತಳ್ಳಿಹಾಕುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!