ಉದಯವಾಹಿನಿ, ಹೊಸಪೇಟೆ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜನಜೀವನದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸುವ ಸಂದೇಶವನ್ನು ಹೊತ್ತ ಜನತಾ ತೀರ್ಪಾಗಿದೆ ಎಂದು ಸಿಪಿಎಂ ವಿಶ್ಲೇಷಿಸಿದೆ.
ಇಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ಸತತ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಹುಮತ ಪಡೆದು ದಶಕಗಳ ಕಾಲ ಜನವಿರೋದಿ ದುರಾಡಳಿತ ನಡೆಸಿದ್ದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಹಿನ್ನಡೆ ಉಂಟುಮಾಡುವ ತೀರ್ಪನ್ನು ಜನತೆ ನೀಡಿದ್ದಾರೆ ಎಂದರು.
‘ಜನತಾ ತೀರ್ಪಿನಿಂದ ನರೇಂದ್ರ ಮೋದಿಯವರಿಗೆ ಮುಖಭಂಗವಾಗಿದೆ. ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಷ್ಟ, ಪ್ರಜಾಪ್ರಭುತ್ವ, ಸಂವಿಧಾನದ ಮೇಲಿನ ದಾಳಿ ಹಾಗೂ ಕೋಮು ದ್ವೇಷದ ವಿರುದ್ದ ಜನರು ಒಟ್ಟಾಗಿ ಇಂಡಿಯಾ ಕೂಟದ ಜನತೆ ನಿಂತರು. ಪ್ರಚಾರದ ಸಂದರ್ಭದಲ್ಲಿ ಮೋದಿಯವರು ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಾಡಿದ ದ್ವೇಷ ಭಾಷಣದ ವಿರುದ್ದ ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದಲ್ಲಿ ಖಂಡಿತವಾಗಿ ಬಿಜೆಪಿ ಮತ್ತಷ್ಟು ಹಿನ್ನಡೆ ಅನುಭವಿಸುತ್ತಿತ್ತು’ ಎಂದು ಅವರು ವಿಶ್ಲೇಷಿಸಿದರು.
ಪಕ್ಷದ ಬಲವರ್ಧನೆ: ಈ ಬಾರಿ ಸಿಪಿಎಂ 4, ಸಿಪಿಐ ಹಾಗು ಸಿಪಿಐ(ಎಂ,ಎಲ್) ತಲಾ 2 ಸೇರಿ ಒಟ್ಟಾಗಿ ಎಡಪಕ್ಷಗಳು 8 ಸ್ಥಾನಗಳನ್ನು ಪಡೆದು ಹಿಂದಿಗಿಂತ ಉತ್ತಮ ಸ್ಥಿತಿ ಹೊಂದಿವೆ ಎಂದು ಅವರು ಪ್ರತಿಪಾದಿಸಿದರು. ಕೇರಳದಲ್ಲಿ ಈ ಬಾರಿ ಒಂದು ಸ್ಥಾನ ಗಳಿಸಿದೆ, ಕಳೆದ ಬಾರಿಯೂ ಒಂದು ಸ್ಥಾನ ಗಳಿಸಿತ್ತು. ಇತರ ರಾಜ್ಯಗಳಲ್ಲಿ ಪಕ್ಷ ಕೊಂಚ ಬಲ ಪಡೆದುಕೊಂಡಿದೆ. ಹೀಗಿದ್ದರೂ ಕೇರಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜನರು ಎಡಪಕ್ಷಕ್ಕೇ ಒಲವು ತೋರಿಸುತ್ತಿದ್ದಾರೆ ಎಂದು ಬಸವರಾಜ್ ಹೇಳಿದರು.
