ಉದಯವಾಹಿನಿ, ಬೆಂಗಳೂರು :  ಪರಿಸರ ಸಂರಕ್ಷಣೆ ಪ್ರತಿ ನಾಗರಿಕರ ಸಾಂವಿಧಾನಿಕ ಕರ್ತವ್ಯವಾಗಿದೆ. ಪ್ರಕೃತಿಯಲ್ಲಿನ ಗಿಡ- ಮರಗಳನ್ನು ಕಾಳಜಿವಹಿಸಿ ರಕ್ಷಿಸಿದರೆ ಮನುಷ್ಯ ಹಾಗೂ ಪ್ರಾಣಿ, ಪಕ್ಷಿ ಸಂಕುಲಕ್ಕೆ ಶುದ್ಧ, ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಭಾರತೀಯ ಸೇನೆಯ ಟೆರಿಟೋರಿಯಲ್ ಸೇನೆಯ ಕಮಿಷನ್‌ಡ್ ಅಧಿಕಾರಿ ಭವ್ಯ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜಕುಮಾರ್ ವಾರ್ಡಿನ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಸಿರು ಉಸಿರು ಫೌಂಡೇಷನ್, ಸೌಹಾರ್ದ ಕರ್ನಾಟಕ ಹಾಗೂ ಕಸ್ತೂರಿ ಕನ್ನಡ ಡಾ.ರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಸಂಘದ ಖಜಾಂಚಿ ದಿವಂಗತ ಬಿ. ದೇವರಾಜ್ ರವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ವನಮಹೋತ್ಸವ ಮತ್ತು ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಹಂಚುವ ಕಾರ್ಯಕ್ರಮಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಸಸಿನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಕೃತಿ ನಾಶದಿಂದ ಜೀವ ಸಂಕುಲಕ್ಕೆ ಆಪತ್ತು ಎದುರಾಗಿದೆ. ಸಸಿ ನೆಡುವ ಕಾರ್ಯಕ್ರಮಗಳು ಕೇವಲ ಪರಿಸರ ದಿನಾಚರಣೆಗೆ, ದಾಖಲೆಗಾಗಿ ಸೀಮಿತವಾಗದೆ ವರ್ಷವಿಡೀ ನಮ್ಮ ಪರಿಸರದಲ್ಲಿ ಸಸಿಗಳನ್ನು ನೆಟ್ಟು ಲಾಲನೆ ಪಾಲನೆ ಮಾಡಬೇಕು. ಗಿಡಮರಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಹಸಿರು ಉಸಿರು ಫೌಂಡೇಷನ್ ಮತ್ತು ಸೌಹಾರ್ದ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ರ. ನರಸಿಂಹಮೂರ್ತಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!