ಉದಯವಾಹಿನಿ, ಕೋಲಾರ : ಮಾಸ್ತಿಯವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು. ಸಣ್ಣ ಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ ಪ್ರಬಂಧ, ವಿಮರ್ಶೆ ಸಂಪಾದನೆ, ಅನುವಾದ ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಎಂದು ಹಿರಿಯ ಪತ್ರಕರ್ತರು ಪ್ರಾ.ಶಿ. ಅನಂತರಾಮ್ ತಿಳಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಜನ್ಮದಿನಾಚರಣೆಯನ್ನು ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ಜಯ ಕರ್ನಾಟಕ ಸಂಘಟನೆ ಹಾಗೂ ಶ್ರೀ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಅವರು ಮಾತನಾಡಿದರು.
ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜನಿಸಿದವರು. ಮೆಟ್ರಿಕ್ಯುಲೇಷನ್, ಬಿ.ಎ. ಮೈಸೂರು ಸಿವಿಲ್ ಸರ್ವಿಸ್ ಎಂ.ಎ. ಮದರಾಸು ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ಮೈಸೂರು ಅರಸರ ಸಂಸ್ಥಾನದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು ಎಂದರು.
ಚಿಕ್ಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಜೀವನ ಪಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರನ್ನು ಸರ್ಕಾರಗಳು ಮರೆಯುತ್ತಿವೆ ಅವರ ಹುಟ್ಟಿದ ಮಾಸ್ತಿ ಊರಿಗೆ ಸರಿಯಾದ ರಸ್ತೆಗಳಿಲ್ಲ ಇದರ ಬಗ್ಗೆ ಜನ ಪ್ರತಿನಿಧಿಗಳು ಗಮನ ಹರಿಸಬೇಕು ಹಾಗೂ ಮಾಸ್ತಿ ರವರ ಬಗ್ಗೆ ಸರಿಯಾದ ಕಾರ್ಯಕ್ರಮಗಳು ನಡೆಯುತ್ತಿಲ್ಲ ಅವರು ಕೊಟ್ಟಂತ ಕಥೆ ಕಾದಂಬರಿ ಸಾಹಿತ್ಯದ ಬಗ್ಗೆ ಜಿಲ್ಲಾಡಳಿತ.ಕನ್ನಡ ಸಂಸ್ಕೃತಿ ಇಲಾಖೆ ಗಮನಹರಿಸಿ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದರು.
