ಉದಯವಾಹಿನಿ, ಬೆಂಗಳೂರು: ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸುವುದ ರೊಂದಿಗೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಇಂದಿನಿಂದ ವಿದ್ಯುಕ್ತವಾಗಿ ಅಧಿಕಾರಕ್ಕೆ ಬರಲಿದೆ.
ಇಂದು ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆಯುವ ವರ್ಣರಂಜಿತ ಐತಿಹಾಸಿಕ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.
ಪಂಡಿತ್ ಜವಹರಲಾಲ್ ನೆಹರೂ ನಂತರ ಸತತವಾಗಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕಾಂಗ್ರೆಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿಯವರು ಪಾತ್ರರಾಗಲಿದ್ದಾರೆ. ಪ್ರಧಾನಿಯವರೊಂದಿಗೆ 30ಕ್ಕೂ ಹೆಚ್ಚು ಸಚಿವರು ಅಧಿಕಾರ ಸ್ವೀಕರಿಸಲಿದ್ದು, 2014 ಹಾಗೂ 2019 ರಲ್ಲಿ ಸ್ವಂತಬಲದ ಮೇಲೆ ಅಧಿಕಾರ ಗದ್ದುಗೆ ನಡೆಸಿದ್ದ ಬಿಜೆಪಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಧರ್ಮವನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ.
ಎನ್‍ಡಿಎ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ, ಜೆಡಿಎಸ್, ಎಚ್‍ಎಎಂ, ಅಪ್ನಾ ದಳ, ಶಿವಸೇನೆ, ಆರ್‍ಎಲ್‍ಡಿ ಸೇರಿದಂತೆ ಮೈತ್ರಿಪಕ್ಷಗಳಿಗೂ ಸಂಪುಟದಲ್ಲಿ ಸಿಂಹಪಾಲು ಸಿಗಲಿದೆ. ಕೇಂದ್ರದ ಪ್ರಮುಖ ಖಾತೆಗಳಾದ ಗೃಹ, ವಿದೇಶಾಂಗ ವ್ಯವಹಾರ, ಹಣಕಾಸು, ರೈಲ್ವೆ, ಸಾರಿಗೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಹಲವು ಖಾತೆಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಳ್ಳಲಿದೆ. ಕರ್ನಾಕಟದಿಂದ ಪ್ರಹ್ಲಾದ್ ಜೋಶಿ-ಧಾರವಾಡ, ಎಚ್.ಡಿ.ಕುಮಾರಸ್ವಾಮಿ-ಮಂಡ್ಯ, ಶೋಭಾ ಕರಂದ್ಲಾಜೆ-ಬೆಂಗಳೂರು ಉತ್ತರ ಅವರುಗಳಿಗೆ ಪ್ರಮಾಣ ವಚನ ಸ್ವೀಕರಿಸಲು ಪ್ರಧಾನಿ ಕಾರ್ಯಾಲಯದಿಂದ ಸೂಚನೆ ಬಂದಿದೆ.
ಆದರೆ ವೀರಶೈವ ಲಿಂಗಾಯತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಅವರ ಹೆಸರುಗಳು ಕೇಳಿ ಬಂದಿವೆ.
ಎನ್‍ಡಿಎ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ, ಶಿವಸೇನೆ, ಆರ್‍ಎಲ್‍ಡಿ, ಅಪ್ನಾದಳ್, ಎಲ್‍ಜೆಪಿ ಪಕ್ಷಗಳಿಗೆ ಸಂಪುಟದಲ್ಲಿ ಒಂದು ಸಂಪುಟ ದರ್ಜೆ ಹಾಗೂ ಒಂದು ರಾಜ್ಯಖಾತೆ ಲಭಿಸಲಿದೆ.

Leave a Reply

Your email address will not be published. Required fields are marked *

error: Content is protected !!