ಉದಯವಾಹಿನಿ, ಕೋಲಾರ: ಭಕ್ತಿಯಿಂದ ಪ್ರಾರಂಭವಾಗುವ ಯೋಗದ ಪಯಣ ಕೊನೆಯಲ್ಲಿ ಪರಮಾತ್ಮನಲ್ಲಿ ಐಕ್ಯವಾಗುವುದೇ ಜೀವಸಮಾಧಿ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.
ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ತಾತಯ್ಯನವರ ೧೮೯ ನೇ ಜೀವ ಸಮಾಧಿ ಪ್ರವೇಶ ಪರ್ವ ಆರಾಧನಾ ಮಹೋತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಗುರುಸಂದೇಶವನ್ನು ನೀಡುತ್ತಾ ಮಾತನಾಡಿದರು.
ದೇಹದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡ ಅಜ್ಞಾನಿಗಳನ್ನು ಮಾತ್ರ ಕರ್ಮಫಲಗಳು ಕಟ್ಟಿಹಾಕುವ ಮೂಲಕ ಮತ್ತೆ ಮತ್ತೆ ಹುಟ್ಟು-ಸಾವುಗಳ ಚಕ್ರದಲ್ಲಿ ಸಿಕ್ಕಿಬೀಳಬೇಕಾಗುತ್ತದೆ. ಆದರೆ ಯೋಗೀಶ್ವರನು ಮಾತ್ರ ದೇಹವು ನಾನಲ್ಲ, ಇಂದ್ರಿಯಗಳು ನಾನಲ್ಲ, ಶುದ್ಧ ಚೇತನಸ್ವರೂಪವಾದ ಪರಬ್ರಹ್ಮವೇ ನಾನು ಎಂದು ಅರಿತುಕೊಳ್ಳುತ್ತಾನೆ. ಇಂತಹ ಯೋಗಿಯು ದೇಹ ತ್ಯಾಗದ ಬಳಿಕ ಪರಬ್ರಹ್ಮತತ್ವದಲ್ಲಿ ಐಕ್ಯವಾಗುತ್ತಾನೆ ಎಂದರು.
ನಾನು ಮತ್ತೆ ಈ ಭೂಮಂಡಲದಲ್ಲಿ ಹುಟ್ಟುವುದಿಲ್ಲ. ಸದ್ಗುರುವಾದ ಪರಮಾತ್ಮನಲ್ಲಿ ಐಕ್ಯವಾಗಿದ್ದೇನೆ. ನನ್ನಲ್ಲಿ ಯಾವುದೇ ಆಸೆಗಳಿಲ್ಲ. ಆಸೆಗಳೆಲ್ಲ ಇಂಗಿಹೋದ ನಮಗೆ ಇದೇ ಕಡೇ ಜನ್ಮ ಎಂದಿದ್ದಾರೆ ಯೋಗಿಸ್ವರೂಪರಾದ ಕೈವಾರದ ತಾತಯ್ಯನವರು. ತಾತಯ್ಯನವರು ಹೀಗೆ ಹೇಳಬೇಕಾದರೆ ಕಾರಣವಿದೆ. ಆಸೆಗಳ ಮಾಯಾ ಬಂಧನವೇ ಮಾನವರ ಭ್ರಾಂತಿಗಳಿಗೆ ಮೂಲ. ಮಾಯೆಯ ಕಾರ್ಯವು ಬಯಕೆಗಳಿಂದ ಆರಂಭವಾಗುತ್ತದೆ ಎಂದು ಹೇಳಿದರು. ಒಂದು ಕೊರತೆಯ ಬಯಕೆಯನ್ನು ಪೂರೈಸುತ್ತಿದ್ದಂತೆಯೇ ಮತ್ತೊಂದು ಬಯಕೆ ಹುಟ್ಟಿಕೊಳ್ಳುತ್ತದೆ. ಕೊರತೆಗಳಿಗೆ ಕೊನೆಯಿಲ್ಲ. ಒಂದಾದ ಮೇಲೊಂದರಂತೆ ಆಸೆಗಳು ಬರುತ್ತಿರುತ್ತದೆ.
