ಉದಯವಾಹಿನಿ, ಕೋಲಾರ:  ಮೈತ್ರಿ ಧರ್ಮ ಪಾಲನೆಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರದ ಟಿಕೆಟ್‌ ಅನ್ನು ಜೆಡಿಎಸ್‌ಗಾಗಿ ತ್ಯಾಗ ಮಾಡಿದ್ದ ಬಿಜೆಪಿಗೆ ಈಗ ಕೋಲಾರ ಜಿಲ್ಲೆಯಲ್ಲಿ ಪ್ರಾತಿನಿಧ್ಯವೇ ಇಲ್ಲದೆ ಅಸ್ವಿತ್ವ ಕಳೆದುಕೊಳ್ಳುವ ಭಯ ಮೂಡಲಾರಂಭಿಸಿದೆ. ಇಡೀ ಜಿಲ್ಲೆಯಲ್ಲಿ ಈಗ ಬಿಜೆಪಿಯ ಒಬ್ಬ ಶಾಸಕನೂ ಇಲ್ಲ, ಸಂಸದರೂ ಇಲ್ಲ.

ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದ ಜಿಲ್ಲೆಯ ವೈ.ಎ.ನಾರಾಯಣಸ್ವಾಮಿ ಕೂಡ ಈ ಬಾರಿ ಸೋಲು ಕಂಡಿದ್ದಾರೆ. 2028ರ ವಿಧಾನಸಭೆ ಚುನಾವಣೆ ನಡೆಯುವವರೆಗೆ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ಇರಲಿದೆ. ಸಹಜವಾಗಿಯೇ ಈ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಆಗಬಹುದೆಂಬ ಚಿಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಡುತ್ತಿದೆ. ಪಕ್ಷ ಸಂಘಟನೆ ಹೇಗೆ, ಮುಂದಾಳತ್ವ ವಹಿಸುವವರು ಯಾರು, ಕಾರ್ಯಕರ್ತರ ನೋವು ಕೇಳುವವರಾರು ಎಂಬ ಆತಂಕ ಹಲವರಲ್ಲಿ ಮನೆ ಮಾಡಿದೆ.ಈ ಬಾರಿ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಬಲದಿಂದ ಎಂ.ಮಲ್ಲೇಶ್‌ ಬಾಬು ಗೆದ್ದಿದ್ದಾರೆ. ಆದರೆ, ಅವರು ವಾಸ್ತವವಾಗಿ ಜೆಡಿಎಸ್‌ ಸಂಸದ. ಸಹಜವಾಗಿ ಅದು ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರಿಗೆ ಹೆಚ್ಚು ಖುಷಿ ತಂದಿದೆ. ಪಕ್ಷ ಸಂಘಟನೆ ಪುಷ್ಟಿ ನೀಡಿದೆ. ಗೆಲುವಿನಲ್ಲಿ ಒಂದು ಭಾಗವಾಗಿದ್ದರೂ ಪಕ್ಷ ಸಂಘಟನೆ ವಿಚಾರದಲ್ಲಿ ಅದೇ ಮಾತನ್ನು ಬಿಜೆಪಿಗೆ ಹೇಳಲಾಗದು.

ಹಿಂದೆ ಕೃಷ್ಣಯ್ಯ ಶೆಟ್ಟಿ, ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ವೈ.ಸಂಪಂಗಿ, ವೈ.ರಾಮಕ್ಕ ಶಾಸಕರಾಗಿದ್ದರು. ಆಗ ಬಿಜೆಪಿಗೆ ಬಲವಿತ್ತು, ಧ್ವನಿ ಇತ್ತು. 2019ರಿಂದ 2024ರವರೆಗೆ ಬಿಜೆಪಿ ಸಂಸದರೇ ಇದ್ದರು. ಅದು ಕ್ಷೇತ್ರದ ಇತಿಹಾಸದಲ್ಲಿ ಬಿಜೆಪಿಗೆ ದೊರೆತ ಚೊಚ್ಚಲ ಗೆಲುವು ಕೂಡ. ಹೀಗಾಗಿ, ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಉತ್ಸಾಹ ನೆಲೆಸಿತ್ತು. ಸಂಸದರಾಗಿದ್ದ ಎಸ್‌.ಮುನಿಸ್ವಾಮಿ ಬಿಜೆಪಿ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಜೊತೆಗೆ ಹಲವು ವಿವಾದಗಳಿಂದ ಸದ್ದು ಮಾಡಿದ್ದರು. ವೇದಿಕೆ ಮೇಲೆ ಹಾಗೂ ಹೊರಗೆ ಕಾಂಗ್ರೆಸ್‌ ಶಾಸಕರೊಂದಿಗೆ ಸಂಘರ್ಷಕ್ಕೆ ಇಳಿದಿದ್ದು ದೊಡ್ಡ ಸುದ್ದಿಯೂ ಆಗಿತ್ತು. ಹಾಗೆಯೇ ಅಂತರಗಂಗೆ ಬೆಟ್ಟದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಯೋಜನೆ, ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಬೃಹತ್‌ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದರು.

Leave a Reply

Your email address will not be published. Required fields are marked *

error: Content is protected !!