ಉದಯವಾಹಿನಿ, ಬೆಂಗಳೂರು: ಡೀಸೆಲ್‌, ಪೆಟ್ರೋಲ್‌ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆ ಮಾಡಿರುವ ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷಕ್ಕೆ ಮುಂಬರುವ ಜಿಲ್ಲಾ, ತಾಲ್ಲೂಕು ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ಯಾರೊಬ್ಬರೂ ಮತ ಹಾಕಬಾರದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಕಾಂಗ್ರೆಸ್‌‍ ಪಕ್ಷದಿಂದ ಸಚಿವರು ಇಲ್ಲವೇ ಶಾಸಕರ ಅಣ್ಣ-ತಮಂದಿರು, ಅಕ್ಕ-ತಂಗಿಯರು ಇಲ್ಲವೇ ಸಂಬಂಧಿಕರೇ ಸ್ಪರ್ಧೆ ಮಾಡಿದರೂ ಅವರಿಗೆ ಒಂದೇ ಒಂದು ಮತ ಹಾಕಬೇಡಿ. ನೀವು ಕಾಂಗ್ರೆಸ್‌‍ಗೆ ಮತ ಹಾಕುವುದರಿಂದ ಮತ್ತಷ್ಟು ದರದ ಬಿಸಿಯನ್ನು ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಗ್ಯಾರಂಟಿಗಳನ್ನು ಜಾರಿ ಮಾಡಿ ಕರ್ನಾಟಕದ ಜನರು ಸಂತೃಪ್ತರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೊಗಳೆ ಬಿಡುತ್ತಿದ್ದಾರೆ. ದೇಶದಲ್ಲಿ ಕರ್ನಾಟಕ ಮಾದರಿ ಚರ್ಚೆಯಾಗುತ್ತಿದೆ ಎಂದು ಮತ್ತೊಂದು ಹಸಿಸುಳ್ಳು ಹೇಳಿದ್ದಾರೆ. ನಿಜವಾಗಿಯೂ ಚರ್ಚೆಯಾಗುತ್ತಿರುವುದು ಏಕಾಏಕಿ ಇಷ್ಟು ದೊಡ್ಡಮಟ್ಟದಲ್ಲಿ ಡೀಸೆಲ್‌, ಪೆಟ್ರೋಲ್‌ ದರವನ್ನು ಏರಿಸಿದ್ದು ಏಕೆ ಎಂಬುದಾಗಿ ಅಶೋಕ್‌ ನುಡಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳು ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್‌‍ ಪಕ್ಷಕ್ಕೆ ಚೊಂಬು ಕೊಡುವುದು ಗ್ಯಾರಂಟಿ. ಜನವಿರೋಧಿ ಸರ್ಕಾರ ಇದು ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಎಲ್ಲರೂ ಹಿಡಿಶಾಪ ಹಾಕುತ್ತಿದ್ದಾರೆ. ಅವರ ಕಣ್ಣೀರಿನ ಶಾಪ ಈ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.  ಮಾತೆತ್ತಿದರೆ ನಾನು 14 ಬಜೆಟ್‌ ಮಂಡಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇರಲಿಲ್ಲವೇ? ರಾಜ್ಯದ ಜನತೆ ಈ ದರಿದ್ರ ಸರ್ಕಾರ ಅಧಿಕಾರದಿಂದ ಹೋದರೆ ಸಾಕು ಎಂದು ಎದುರು ನೋಡುತ್ತಿದ್ದಾರೆ. ಯಾವ ನೈತಿಕತೆ ಇಟ್ಟುಕೊಂಡು ಅಧಿಕಾರದಲ್ಲಿ ಸಿದ್ದರಾಮಯ್ಯ ಮುಂದುವರೆಯುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದರು.

 

Leave a Reply

Your email address will not be published. Required fields are marked *

error: Content is protected !!