ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ತೊಲಗದಿದ್ದರೆ ಮುಂದಿನ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧವನ್ನೇ ಅಡ ಇಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಪಕ್ಷದ ವತಿಯಿಂದ ನಗರದ ಫ್ರೀಡಂಪಾರ್ಕ್‌ನಲ್ಲಿ ಹಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾರ್ಪೋರೇಷನ್ ಕಟ್ಟಡಗಳು , ವಾರ್ಡ್ ಕಚೇರಿ ಅಡ ಇಟ್ಟು ಬ್ಯಾಂಕ್‌ನಿಂದ ಸಾಲ ಪಡೆಯಲು ಇಟ್ಟಿದ್ದಾರೆ. ಇದೇ ಪ್ರವೃತ್ತಿ ಮುಂದುವರೆದರೆ ಸಿಎಂ ಸಿದ್ದರಾಮಯ್ಯನವರು ವಿಧಾನಸೌಧವನ್ನು ಅಡ ಇಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ತಮ ಭಾಷಣದ ವೇಳೆ ಅಶೋಕ್ ಅವರು ಈ ಹಿಂದೆ ಸಿದ್ದರಾಮಯ್ಯನವರು ವಿಪಕ್ಷ ನಾಯಕನಾಗಿದ್ದ ವೇಳೆ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಭಾಷಣದ ವಿಡಿಯೋವನ್ನು ಪ್ರದರ್ಶಿಸಿದರು.
ನಾವು ಅಂದು ಆಡಳಿತದಲ್ಲಿದ್ದಾಗ ಒಂದು ರೂ. ಬೆಲೆ ಹೆಚ್ಚಳ ಮಾಡಿದ್ದಕ್ಕೆ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ್ದರು. ಈಗ ಪೆಟ್ರೋಲ್ ದರವನ್ನು 3 ರೂ. 50 ಪೈಸೆ ಹಾಗೂ ಡೀಸೆಲ್ ದರವನ್ನು 3 ರೂ.ಗೆ ಏರಿಕೆ ಮಾಡಿದ್ದಾರೆ. ಹಾಗಾದರೆ ನಿಮ ಸರ್ಕಾರಕ್ಕೆ ಮಾನಮರ್ಯಾದೆ ಇದೆಯೇ ಎಂದು ತರಾಟೆಗೆ ತೆಗೆದುಕೊಂಡರು.
ವಾಲೀಕಿ ಅಭಿವೃದ್ಧಿ ನಿಗಮದ ಹಣ ನುಂಗಿದ ಆರೋಪದಲ್ಲಿ ಸಚಿವ ನಾಗೇಂದ್ರ ಅವರ ಮೊದಲ ವಿಕೆಟ್ ಬಿದ್ದಿದೆ. ಈಗ 2ನೇ ವಿಕೆಟ್ ಬೀಳುವುದೇ ಸಿದ್ದರಾಮಯ್ಯನವರದು. ನಾಗೇಂದ್ರ 20% ಹೊಡೆದರೆ ಸಿದ್ದರಾಮಯ್ಯ 80% ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದರು. 187 ಕೋಟಿ ಹಣವನ್ನು ಹಗಲು ದರೋಡೆ ಮಾಡಿದ್ದಾರೆ. ದಲಿತರ ಹಣ ಬಾರ್‌ಗಳಿಗೆ ಹೋಗಿದೆ. ಎಲ್ಲೆಂದರಲ್ಲಿ ಹಾಡುಹಗಲೇ ಹಿಂದೂಗಳ ಕಗ್ಗೊಲೆಯಾಗುತ್ತದೆ.
