ಉದಯವಾಹಿನಿ, ನವದೆಹಲಿ: ಕೇಂದ್ರದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಸರ್ಕಾರ, ಸರ್ಕಾರಿ ಉದ್ಯೋಗಿಗಳಿಗೆ ಖಡಕ್ ಸೂಚನೆಯೊಂದನ್ನು ನೀಡಿದೆ. ತಡವಾಗಿ ಕಛೇರಿಗೆ ಬರುವ ಮತ್ತು ಬೇಗ ತೆರಳುವ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.
ಹಲವು ಅಧಿಕಾರಿ/ ಸಿಬ್ಬಂದಿ ಬಯೊಮೆಟ್ರಿಕ್ ಹಾಜರಾತಿ (ಎಇಬಿಎಎಸ್) ವ್‌ಯವಸ್ಥೆಯ ಮೂಲಕ ಹಾಜರಾತಿ ದಾಖಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ, ಈ ಸೂಚನೆ ನೀಡಲಾಗಿದೆ. ಹಲವ ಉದ್ಯೋಗಿಗಳು ನಿಯಮಿತವಾಗಿ ತಡವಾಗಿ ಬರುತ್ತಿರುವುದನ್ನು ಗಮನಿಸಲಾಗಿದೆ.
ಸಂಬಂಧಿಸಿದ ಪ್ರಾಧಿಕಾರಗಳು ಅಧಿಕಾರಿ/ ಸಿಬ್ಬಂದಿಗಳು ಪ್ರತಿದಿನ ತಡವಾಗಿ ಬರುವುದು, ಕಛೇರಿಯಿಂದ ಬೇಗ ತೆರಳುವುದನ್ನು ಗಮನಿಸಿದೆ. ಆದ್ದರಿಂದ ಉದ್ಯೋಗಿಗಳಿಗೆ ಸರಿಯಾದ ಸಮಯದಲ್ಲಿ ಕಛೇರಿಯಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ.
ಮೊಬೈಲ್ ಅಪ್ಲಿಕೇಶನ್ ಆಧಾರಿತ ಹಾಜರಾತಿ ವ್ಯವಸ್ಥೆಯಲ್ಲಿ ಉದ್ಯೋಗಿಗಳು ಹಾಜರಾತಿ ಹಾಕಿದ ಲೋಕೇಶನ್‌ನ್ನು ಪತ್ತೆ ಹಚ್ಚಬಹುದು. ಇದರಲ್ಲಿ ಹಲವಾರು ಉದ್ಯೋಗಿಗಳು ನಿರಂತರವಾಗಿ ತಡವಾಗಿ ಬರುತ್ತಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರದ ವ್‌ಯಾಪ್ತಿಗೆ ಒಳಪಡುವ ಎಲ್ಲಾ ಸಚಿವಾಲಯ/ ಇಲಾಖೆ/ ಸಂಸ್ಥೆಗಳು ಬಯೊಮೆಟ್ರಿಕ್ ಹಾಜರಾತಿ (ಎಇಬಿಎಎಸ್) ವ್‌ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಿಯಮಿತವಾಗಿ ಅದನ್ನು ಪರಿಶೀಲಿಸಬೇಕು, ಉದ್ಯೋಗಿಗಳು ತಡವಾಗಿ ಬರದಂತೆ ಸೂಚಿಸಬೇಕು ಎಂದು ಹೇಳಿದೆ.
