ಉದಯವಾಹಿನಿ, ಸೈದಾಪುರ: ಪಟ್ಟಣದ ಎಸ್‍ಬಿಐ ಬ್ಯಾಂಕ್‍ನಿಂದ ಕನಕ ವೃತ್ತದವರೆಗೆ ಕೈಗೊಂಡಿರುವ ಒಳಚರಂಡಿ ನಿರ್ಮಾಣ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದೆ. ಇದು ಜನಸಾಮಾನ್ಯರಲ್ಲಿ ಖುಷಿಯನ್ನುಂಟು ಮಾಡುವ ಬದಲು ಕಿರಿಕಿರಿಗೆ ಕಾರಣವಾಗಿದೆ.
ಸುತ್ತಲಿನ ಹತ್ತಾರು ಗ್ರಾಮಗಳ ಶೈಕ್ಷಣಿಕ, ವ್ಯವಹಾರಿಕ ಕೇಂದ್ರಕ್ಕೆ ಸಾರಿಗೆ ಮತ್ತು ರೈಲು ಸಂಪರ್ಕ ಇರುವುದರಿಂದ ಪ್ರತಿನಿತ್ಯ ನೂರಾರು ವಾಹನಗಳಲ್ಲಿ ಸಾವಿರಾರು ಜನ ಸಂಚರಿಸುತ್ತಾರೆ.
ಒಳಚರಂಡಿ ನಿರ್ಮಾಣಕ್ಕಾಗಿ ಯಾದಗಿರಿ-ರಾಯಚೂರು ರಸ್ತೆಯನ್ನು ಕನಕ ವೃತ್ತದಲ್ಲಿ ಒಂದು ವಾರದ ಹಿಂದೆ ಅಗೆಯಲಾಗಿದೆ. ಹೀಗಾಗಿ ಯಾದಗಿರಿ ಮತ್ತು ರಾಯಚೂರಿಗೆ ತೆರಳುವ ವಾಹನಗಳು, ಪಟ್ಟಣದ ಬಸವೇಶ್ವರ ವೃತ್ತದ ಮೂಲಕ ತೆರಳಬೇಕಾಗಿದೆ. ಆದರೆ ಇಕ್ಕಟ್ಟಾದ ಪಟ್ಟಣದ ಒಳ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ದ್ವಿಚಕ್ರ ವಾಹನಗಳಿಂದ ಸುಗಮ ವಾಹನ ಸಂಚಾರ ಸಾಧ್ಯವಾಗದೆ, ವಾಹನ ಸವಾರರು ಪರದಾಡುವಂತಾಗಿದೆ. ಆಟೋ, ಟಂಟಂ ಸೇರಿದಂತೆ ಇತರ ವಾಹನಗಳು ಸೇರಿ ವಾಹನ ದಟ್ಟಣೆ ಹೆಚ್ಚಾಗಿ ವಾಹನಗಳು ಹಿಂದೆ-ಮುಂದೆ ಹೋಗದೆ ರಸ್ತೆ ಮಧ್ಯೆ ತಾಸುಗಟ್ಟಲೇ ನಿಂತು ತೊಂದರೆ ಅನುಭವಿಸುವಂತಾಗಿದೆ. ಮುಂದಿನ ದಿನಗಳಲ್ಲಾದರೂ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರ ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ: ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರ ಆರೋಪವಾಗಿದೆ. ಮತ್ತೊಂದಡೆ ಸ್ಥಳೀಯ ಆಡಳಿತದಿಂದ ವಾಹನ ಸಂಚಾರ ನಿರ್ವಹಣೆಯಾಗುತ್ತಿಲ್ಲ. ಇದರಿಂದಾಗಿ ಲಾರಿ, ಬಸ್, ಭಾರೀ ವಾಹನಗಳು ಗಂಟೆಗಟ್ಟಲೇ ರಸ್ತೆಯಲ್ಲಿಯೇ ಕಾಯಬೇಕಿದೆ. ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳಿಗೆ, ವೃದ್ಧರಿಗೆ ತೀವ್ರ ತೊಂದರೆಯಾಗುತ್ತಿದೆ. ಅನೇಕ ಬಸ್‌ಗಳು ಪಟ್ಟಣದೊಳಗೆ ಬರದೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹೊರಗಿಂದ ಹೊರಗೆ ಹೋಗುತ್ತಿರುವುದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರು ಸಂಕಷ್ಟ ಅನುಭವಿಸಬೇಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
